

ಮೈಸೂರು: ನನ್ನ ಅವಶ್ಯಕತೆ ಇರಲಿಲ್ಲವೇನೋ ಅದಕ್ಕಾಗಿ ನನ್ನ ಹೆಸರನ್ನು ಕೊನೆ ಕ್ಷಣದಲ್ಲಿ ಕೈ ಬಿಟ್ಟರು. ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿರುವುದರ ಹಿಂದಿನ ಉದ್ದೇಶವೇನು ಎಂಬುದು ಗೊತ್ತಿಲ್ಲ’ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಸ್ವತಃ ಸಿಎಂ ಕರೆ ಮಾಡಿ ಪ್ರಮಾಣವಚನಕ್ಕೆ ಬನ್ನಿ ಎಂದು ಹೇಳಿದರು. ಆದರೆ, 11 ಗಂಟೆಗೆ ಮತ್ತೆ ಕರೆ ಮಾಡಿ ನಿಮ್ಮ ಹೆಸರು ಕೈಬಿಟ್ಟಿದ್ದೇವೆ, ಮಲ್ಲಣ್ಣಗೆ ಅವಕಾಶ ಕೊಟ್ಟಿದ್ದೇವೆ ಎಂದರು. ಆ ನಡುವೆ ಏನೇನು ನಡೆಯಿತು ಎಂಬುದು ಗೊತ್ತಿಲ್ಲ ಎಂದರು.
ಕರಾವಳಿಗೆ ಅನ್ಯಾಯ ಆಯ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾರಿಗೆ ಅನ್ಯಾಯ, ಯಾವ ಭಾಗಕ್ಕೆ ಅನ್ಯಾಯವಾಯಿತು ಎಂಬುದನ್ನು ನಾವು ಹೇಳಿದರೂ ಅದು ಮಾತಲ್ಲೇ ಉಳಿಯುತ್ತದೆ ಎಂದರು. ಆ ಭಾಗದ ಜನರೇ ಅದಕ್ಕೆ ತಕ್ಕ ಉತ್ತರ ಕೊಡ್ತಾರೆ.
ನನ್ನ ಅವಶ್ಯಕತೆ ಇರಲಿಲ್ಲವೇನೋ, ಅದಕ್ಕೆ ಕೊನೆ ಕ್ಷಣದಲ್ಲಿ ಕೈಬಿಟ್ಟಿದ್ದಾರೆ. ಆದರೆ ಇಂತಹದೇ ಉದ್ದೇಶಕ್ಕೆ ಕೈಬಿಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಮಂತ್ರಿಯಾಗಿ ಮೂರು ವರ್ಷಗಳ ಕಾಲ ಒಳ್ಳೆಯ ಕೆಲಸ ಮಾಡಿದ್ದೇನೆ. ಯಾವುದೇ ಕೆಟ್ಟ ಹೆಸರು ತಂದುಕೊಂಡಿಲ್ಲ, ನನಗೆ ಅಷ್ಟು ಸಾಕು ಎಂದು ಹೇಳಿದರು. ಮಂತ್ರಿ ಸ್ಥಾನಕ್ಕಾಗಿ ಇಡೀ ರಾಜ್ಯದಲ್ಲಿ ಗಲಾಟೆ ಮಾಡುತ್ತಿದ್ದಾರೆ. 34 ಬಿಟ್ಟು 35 ಸಚಿವ ಸ್ಥಾನ ಕೊಡೋಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ.