'ಜೆಡಿಎಸ್ ಪಾದಯಾತ್ರೆ ಅಲ್ಲ, ಕುಮಾರಸ್ವಾಮಿ ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಯಾತ್ರೆ: ಸಚಿವ ಬಾಲಕೃಷ್ಣ ತಿರುಗೇಟು

ಇದೇ ವೇಳೆ ನೈಸ್‌ ರಸ್ತೆಗೆ ಟೋಲ್ ಕಟ್ಟಬೇಡಿ ಎಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ನೈಸ್ ಯೋಜನೆ ಆರಂಭವಾಗಿದ್ದೇ ಎಚ್.ಡಿ. ದೇವೇಗೌಡರ ಕಾಲದಲ್ಲಿ ಎಂದರು.
H D Kumaraswamy, H C Balakrishna
ಎಚ್ ಡಿ ಕುಮಾರಸ್ವಾಮಿ, ಎಚ್ ಸಿ ಬಾಲಕೃಷ್ಣ
Updated on

ರಾಮನಗರ: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಬಿಡದಿ ಟೌನ್‌ಶಿಪ್‌ ಜಟಾಪಟಿ ಮುಂದುವರೆದಿದ್ದು, ಜೆಡಿಎಸ್‌ ಭಾನುವಾರ ಯೋಜನೆ ವಿರೋಧಿಸಿ ಪಾದಯಾತ್ರೆ ನಡೆಸುತ್ತಿದೆ.

ಜೆಡಿಎಸ್ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಚ್.ಸಿ. ಬಾಲಕೃಷ್ಣ ಅವರು,‘ಇದು ಪಾದಯಾತ್ರೆ ಅಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಪಾಪಕ್ಕೆ ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ ಯಾತ್ರೆ’ ಎಂದು ವ್ಯಂಗ್ಯವಾಡಿದರು.

ಇಂದು ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ ಅವರು, ಕುಮಾರಸ್ವಾಮಿ ಅವರೇ ತಂದ ಯೋಜನೆ ವಿರೋಧಿಸಿ ಅವರೇ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಆರಂಭಿಸಿದ್ದೇ ಕುಮಾರಸ್ವಾಮಿ. ಈ ಯೋಜನೆ ಮಾಡಿ ಎಂದು ಯಾರಾದರೂ ಅವರನ್ನು ಕೇಳಿದ್ದರಾ ಎಂದು ಪ್ರಶ್ನಿಸಿದರು.

H D Kumaraswamy, H C Balakrishna
ಸಚಿವ ಸ್ಥಾನಕ್ಕಾಗಿ ಕೃಷ್ಣಪ್ಪ ಬಿಗಿ ಪಟ್ಟು: ಡಿಕೆಶಿ ಸಂಪುಟದಿಂದ ಒಬ್ಬರಿಗೆ ಕೊಕ್? 'ನಾನು ರಾಜೀನಾಮೆಗೆ ಸಿದ್ಧ' ಎಂದ ಬಾಲಕೃಷ್ಣ!

ತಾವು ತಂದ ಯೋಜನೆಯ ವಿರುದ್ಧವೇ ಈಗ ರಾಜಕೀಯ ಪಾದಯಾತ್ರೆ ಮಾಡುತ್ತಿರುವುದು ದುರಾದೃಷ್ಟಕರ. ರೈತರು ಪಾದಯಾತ್ರೆ ಮಾಡಿದರೆ ನಾವು ವಿರೋಧಿಸುವುದಿಲ್ಲ. ಆದರೆ ಜೆಡಿಎಸ್‌-ಬಿಜೆಪಿಯವರು ಕೂತು ಕೂತು ದಪ್ಪ ಆಗಿದ್ದಾರೆ. ಸ್ವಲ್ಪ ಎಕ್ಸರ್ಸೈಸ್ ಆಗಲಿ ಎಂದು ವಾಕಿಂಗ್ ಮಾಡುತ್ತಿದ್ದಾರೆ ಎಂದರು.

ಯಾರ ಆಡಳಿತ ಅವಧಿಯಲ್ಲಿ ಏನೇನು ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನೊಳಗೊಂಡ ಜಾಹೀರಾತನ್ನು ಶೀಘ್ರದಲ್ಲೇ ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷದ ವತಿಯಿಂದ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಇದೇ ವೇಳೆ ನೈಸ್‌ ರಸ್ತೆಗೆ ಟೋಲ್ ಕಟ್ಟಬೇಡಿ ಎಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ನೈಸ್ ಯೋಜನೆ ಆರಂಭವಾಗಿದ್ದೇ ಎಚ್.ಡಿ. ದೇವೇಗೌಡರ ಕಾಲದಲ್ಲಿ. ದೇವೇಗೌಡರು ನೈಸ್‌ ರಸ್ತೆ ಮಾಡದಿದ್ದರೆ ಇವತ್ತು ಈ ಚರ್ಚೆಯೇ ಇರುತ್ತಿರಲಿಲ್ಲ. ಟೋಲ್ ಕಟ್ಟಬೇಡಿ ಎಂದು ಹೇಳಲು ಕುಮಾರಸ್ವಾಮಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಾತನಾಡುತ್ತಿದ್ದಾರಾ? ಕಾನೂನುಬದ್ಧವಾಗಿ ಹೋರಾಟ ಮಾಡಲಿ. ಜನರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುವುದು, ಗುಂಪು ಕಟ್ಟುವುದು ಕ್ಷುಲ್ಲಕ ರಾಜಕಾರಣ. ಅಲ್ಲಿ ಏನಾದರೂ ಹೆಚ್ಚು-ಕಡಿಮೆಯಾದರೆ ಯಾರು ಜವಾಬ್ದಾರಿ? ಅವರು ತಮ್ಮ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಗುರಿ ತಲುಪಲು ನಾವು ಯಾವುದೇ ಅಡ್ಡಿಪಡಿಸುವುದಿಲ್ಲ. ಪಾದಯಾತ್ರೆಗೆ ಸಂಪೂರ್ಣ ಅನುಮತಿ ನೀಡುತ್ತೇವೆ ಎಂದು ಬಾಲಕೃಷ್ಣ ತಿರುಗೇಟು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com