ಬಿಡದಿ ಹೋರಾಟ ಅರ್ಧಕ್ಕೆ ಸ್ಥಗಿತ; ‘ರೈತರ ನ್ಯಾಯಕ್ಕಾಗಿ ತಾರ್ಕಿಕ ಅಂತ್ಯದವರೆಗೆ ಹೋರಾಟ’ ಎಂದ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ..!

ಪೊಲೀಸರು ಪಾದಯಾತ್ರೆ ತಡೆದ ಹಿನ್ನೆಲೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರು ಆಗಸ್ಟ್‌ 18ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದರು.
JDS Protest
ಜೆಡಿಎಸ್ ಪ್ರತಿಭಟನೆ
Updated on

ಬೆಂಗಳೂರು: ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗಾಗಿ ಬಿಡದಿ ಬಳಿ ರೈತರ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಪೊಲೀಸರು ಅರ್ಧಕ್ಕೇ ತಡೆದಿದ್ದಾರೆ.

ಬೆಂಗಳೂರು ನಗರ ಪ್ರವೇಶಕ್ಕೆ ಪ್ರತಿಭಟನಾ ಮೆರವಣಿಗೆಗಳಿಗೆ ನಿರ್ಬಂಧ ಇರುವ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಭಾನುವಾರ ಆರಂಭವಾಗಿದ್ದ ಪಾದಯಾತ್ರೆಯನ್ನು ಪೊಲೀಸರು ಬೆಂಗಳೂರಿಗೆ ಪ್ರವೇಶಿಸುವ ಮುನ್ನವೇ ತಡೆದರು.

ಪೊಲೀಸರು ಪಾದಯಾತ್ರೆ ತಡೆದ ಹಿನ್ನೆಲೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರು ಆಗಸ್ಟ್‌ 18ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದರು.

ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪಾದಯಾತ್ರೆಯಲ್ಲಿ ಭಾಗವಹಿಸಿ, ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಘೋಷಿಸಿರುವುದು ಜೆಡಿಎಸ್‌ ಹೋರಾಟಕ್ಕೆ ಮತ್ತಷ್ಟು ಬಲ ನೀಡಿತು.

93 ವರ್ಷದ ದೇವೇಗೌಡರು ಪಾದಯಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಜೆಡಿಎಸ್‌ ಪಾದಯಾತ್ರೆಯನ್ನು ಕಾಂಗ್ರೆಸ್‌ ನಾಯಕರು ‘ಪ್ರಾಯಶ್ಚಿತ್ತ ಯಾತ್ರೆ’ ಎಂದು ಟೀಕಿಸಿರುವುದಕ್ಕೆ ತಿರುಗೇಟು ನೀಡಿದರು.

“ವಯಸ್ಸಾಗಿರುವುದು ನನ್ನ ದೇಹಕ್ಕೆ ಮಾತ್ರ. ನನ್ನ ಮನಸ್ಸಿಗೆ ಮತ್ತು ಹೋರಾಟದ ಸಂಕಲ್ಪಕ್ಕೆ ವಯಸ್ಸಾಗಿಲ್ಲ. ರೈತರ ನ್ಯಾಯಕ್ಕಾಗಿ ನಾನು ಹೋರಾಟ ಮುಂದುವರಿಸುತ್ತೇನೆ. ಅಗತ್ಯವಿದ್ದರೆ ಗಾಲಿಕುರ್ಚಿಯಲ್ಲಿದ್ದರೂ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ,” ಎಂದು ಹೇಳಿದರು.

ಇದೇ ವೇಳೆ ಮಾಗಡಿ ಶಾಸಕ ಹಾಗೂ ಸಚಿವ ಎಚ್‌.ಸಿ. ಬಾಲಕೃಷ್ಣ ವಿರುದ್ಧವೂ ವಾಗ್ದಾಳಿ ನಡೆಸಿದ ದೇವೇಗೌಡ ಅವರು, “ಮುಂದಿನ ದಿನಗಳಲ್ಲಿ ಯಾರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಕಾದು ನೋಡಿ. ನನ್ನ ದೇಹಕ್ಕೆ ವಯಸ್ಸಾಗಿದೆ, ಆದರೆ, ಮನಸ್ಸಿಗೆ ವಯಸ್ಸಾಗಿಲ್ಲ. ರೈತರ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ,” ಎಂದರು.

JDS Protest
'ರೈತರ ಬದುಕು ನಾಶ ಮಾಡಿ ಯೋಜನೆ': ಬಿಡದಿ ಟೌನ್ ಶಿಪ್ ಭೂಸ್ವಾಧೀನ ವಿರೋಧಿಸಿ ಜೆಡಿಎಸ್ ಪಾದಯಾತ್ರೆ: ಮಾಜಿ ಪ್ರಧಾನಿ HD ದೇವೇಗೌಡ ಭಾಗಿ

ಬಳಿಕ ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯನ್ನೂ ಪ್ರಶ್ನಿಸಿದ ಅವರು, ಕಾಂಗ್ರೆಸ್‌ ಸರ್ಕಾರಕ್ಕೆ ಮೂರು ವರ್ಷ ಕಳೆದಿದ್ದು, ಇನ್ನೂ ಎರಡು ವರ್ಷ ಬಾಕಿ ಇದೆ. ಜನರು ಸರ್ಕಾರದ ನಡೆ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಪ್ರಶ್ನಿಸಿದ ದೇವೇಗೌಡ ಅವರು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಕೇವಲ ಒಂದು ತಿಂಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಏಕೆ ಆತುರಪಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

“ನೀವು ಮೂರು ವರ್ಷ ಉಪಮುಖ್ಯಮಂತ್ರಿಯಾಗಿರಲಿಲ್ಲವೇ? ಬೆಂಗಳೂರು ನಗರವನ್ನು ಐದು ಪಾಲಿಕೆಗಳಾಗಿ ವಿಭಜಿಸುವ ನಿರ್ಧಾರ ಕೈಗೊಂಡವರು ನೀವೇ ಅಲ್ಲವೇ?” ಎಂದು ಪ್ರಶ್ನಿಸಿದರು.

ಕಣಿಮಿಣಿಕೆಯಲ್ಲಿ ಪೊಲೀಸರಿಂದ ಪಾದಯಾತ್ರೆ ತಡೆ

ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಸಾವಿರಾರು ಜೆಡಿಎಸ್‌ ಕಾರ್ಯಕರ್ತರು, ಕೆಲ ಬಿಜೆಪಿ ಕಾರ್ಯಕರ್ತರೊಂದಿಗೆ ಕಣಿಮಿಣಿಕೆ ಟೋಲ್ ಪ್ಲಾಜಾ ಬಳಿ ಪಾದಯಾತ್ರೆ ಮುಂದುವರಿಸಿದಾಗ ಪೊಲೀಸರು ಬ್ಯಾರಿಕೇಡ್‌ ಹಾಕಿ ತಡೆದರು.

ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಬಳಿಕ ಪೊಲೀಸರು ಪಾದಯಾತ್ರಿಕರಿಗೆ ಮತ್ತೊಂದು ಕಿಲೋಮೀಟರ್‌ವರೆಗೆ ಸಾಗಲು ಅವಕಾಶ ನೀಡಿದರು. ಅಲ್ಲಿಂದ ಬೆಂಗಳೂರು-ಮೈಸೂರು ಹೆದ್ದಾರಿಯ ಸಿರಿ ಕನ್ವೆನ್ಷನ್‌ ಹಾಲ್‌ ಬಳಿ ಪಾದಯಾತ್ರೆ ಅಂತ್ಯಗೊಂಡಿತು.

ಆಗಸ್ಟ್‌ 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದೇವೇಗೌಡರ ನೇತೃತ್ವದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ನಿಖಿಲ್‌ ತಿಳಿಸಿದರು.

‘ರೈತರ ಭೂಮಿ ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ’

ಸರ್ಕಾರ ರೈತರ ಭೂಮಿಯನ್ನು ಕಸಿದುಕೊಳ್ಳಲು ಮುಂದಾಗಿದೆ. ಪಾದಯಾತ್ರೆಗೆ ಅಡ್ಡಿಪಡಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ ಎಂದು ನಿಖಿಲ್‌ ಆರೋಪಿಸಿದರು.

“ಬೈರಮಂಗಲದಲ್ಲಿ ರೈತರು 517 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಮುಖ್ಯಮಂತ್ರಿ ರೈತರಿಗೆ ಎಕರೆಗೆ ರೂ.3 ಕೋಟಿ ನೀಡುವ ಹೊಸ ಪ್ರಸ್ತಾಪ ಮಾಡಿದ್ದಾರೆ. ಹಿಂದೆ ರೂ.2 ಕೋಟಿ ನೀಡುವುದಾಗಿ ಹೇಳಿದ್ದರು. ಆದರೆ ರೈತರು ನಿಮ್ಮ ಹಣಕ್ಕೆ ಬಲಿಯಾಗುವುದಿಲ್ಲ. ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ,

ರೈತರ ಸ್ವಾಭಿಮಾನವನ್ನು ಹಣದಿಂದ ಅಳೆಯಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, “ನೀವು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ. ಆದರೆ ಇಲ್ಲಿ ಯಾರೂ ನಿಮ್ಮ ಹಣದ ಆಮಿಷಕ್ಕೆ ತಲೆಬಾಗುವುದಿಲ್ಲ,” ಎಂದು ಗುಡುಗಿದರು.

ಜೆಡಿಎಸ್‌ ಹಾಗೂ ಗೌಡ ಕುಟುಂಬಕ್ಕೆ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗಿರುವ ಬಗ್ಗೆ ಯಾವುದೇ ಅಸೂಯೆ ಇಲ್ಲ. ಆದರೆ ಅವರು ತಪ್ಪು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾವು ಮುಖ್ಯಮಂತ್ರಿಯ ಪರ ನಿಲ್ಲಬೇಕೋ ಅಥವಾ ಬಡ ರೈತರ ಪರ ನಿಲ್ಲಬೇಕೋ? ಎಷ್ಟೇ ಅಡೆತಡೆಗಳು ಎದುರಾದರೂ ನಮ್ಮ ಹೋರಾಟ ನಿಲ್ಲುವುದಿಲ್ಲ,” ಎಂದರು.

ಇತ್ತೀಚೆಗೆ ತಮ್ಮ ಕುಟುಂಬದಲ್ಲಿ ನಡೆದ ದುಃಖದ ಸಂದರ್ಭವನ್ನೂ ನಿಖಿಲ್‌ ಪ್ರಸ್ತಾಪಿಸಿದರು. ತಮ್ಮ ಅಜ್ಜಿ ಚೆನ್ನಮ್ಮ ಅವರ ನಿಧನದ 15 ದಿನಗಳಲ್ಲೇ ದೇವೇಗೌಡರು ರೈತರ ಪರವಾಗಿ ನಿಲ್ಲಲು ಪಾದಯಾತ್ರೆಗೆ ಬಂದಿದ್ದಾರೆ. ಇದು ಅವರ ರೈತಪರ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಬಳಿಕ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪಾದಯಾತ್ರೆ ಜೆಡಿಎಸ್‌ ಅನ್ನು ಪುನಶ್ಚೇತನಗೊಳಿಸುವ ಹಾಗೂ ಗೌಡ ಕುಟುಂಬದ ಮೂರನೇ ತಲೆಮಾರಿನ ನಾಯಕತ್ವವನ್ನು ಮರುಸ್ಥಾಪಿಸುವ ಪ್ರಯತ್ನ ಎಂದು ಟೀಕಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ ನಿಖಿಲ್‌, ದೇವೇಗೌಡರು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ದೇಶದ ಪ್ರಧಾನಿಯಾಗಿದ್ದರು ಎಂದು ಹೇಳಿದರು.

“ನಾನು ದೇವೇಗೌಡರ ಮೊಮ್ಮಗ ಎಂಬ ಕಾರಣಕ್ಕೆ ಜನರು ನನ್ನನ್ನು ಒಪ್ಪಿಕೊಳ್ಳುವುದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಪರ ನಿಂತಾಗ ಮಾತ್ರ ಜನರು ನಮ್ಮನ್ನು ಒಪ್ಪಿಕೊಳ್ಳುತ್ತಾರೆ,” ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com