'ನಾನು ಫುಟ್‌ಬಾಲ್ ಆಟಗಾರನಲ್ಲ, ಚೆಸ್ ಆಟಗಾರ, 2028ರ ಚುನಾವಣೆ ಹೇಗೆ ಎದುರಿಸಬೇಕು ಎಂದು ನಂಗೆ ಗೊತ್ತು'- D K ಶಿವಕುಮಾರ್; ಸಿದ್ದರಾಮಯ್ಯ ಮೀರಿ ನೋಡುತ್ತಿದೆಯೇ ಕಾಂಗ್ರೆಸ್ ?

ಕಾಂಗ್ರೆಸ್‌ನ ಕೇಂದ್ರ ನಾಯಕತ್ವವು ಈಗಾಗಲೇ ತನ್ನ ಕಾರ್ಯತಂತ್ರವನ್ನು ಬದಲಿಸುವ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವದಿಂದ ಪಕ್ಷವನ್ನು ಹೊರತರುವ ಯೋಜನೆಯನ್ನು ಜಾರಿಗೆ ತಂದಿರುವಂತೆ ಕಾಣುತ್ತಿದೆ.
D K Shivakumar
ಡಿ ಕೆ ಶಿವಕುಮಾರ್
Updated on

“ನಾನು ಫುಟ್‌ಬಾಲ್ ಆಟಗಾರನಲ್ಲ; ನಾನು ಚೆಸ್ ಆಟಗಾರ. 2028ರ ವಿಧಾನಸಭಾ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬುದು ನನಗೆ ಗೊತ್ತಿದೆ.” — ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಾರದ ಆರಂಭದಲ್ಲಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿ ಮಾಡಿದ ಚೊಚ್ಚಲ ಭಾಷಣದಲ್ಲಿ ಹೀಗೆ ಹೇಳಿದ್ದರು.

ಆದರೆ ಎರಡೂ ಕ್ರೀಡೆಗಳಲ್ಲೂ ಎದುರಾಳಿಯ ನಡೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಅವರನ್ನು ಮಣಿಸಲು ಉತ್ತಮ ತಂತ್ರ ಹಾಗೂ ಮೈದಾನ/ಸ್ಥಳದ ನಿಯಂತ್ರಣದ ಅಗತ್ಯವಿರುವುದರಿಂದ, ಡಿಕೆ ಶಿವಕುಮಾರ್ ಅವರು ಈ ಎರಡೂ ಆಟಗಳ ನಡುವಿನ ವ್ಯತ್ಯಾಸದ ಮೂಲಕ ಏನನ್ನು ಹೇಳಲು ಪ್ರಯತ್ನಿಸಿದರು ಎಂಬುದು ಸ್ಪಷ್ಟವಾಗಲಿಲ್ಲ.

ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಡಿ ಕೆ ಶಿವಕುಮಾರ್ ಅವರ ಸಾಮರ್ಥ್ಯಕ್ಕೆ ಪರೀಕ್ಷೆ ಎದುರಾಗಲಿದ್ದರೂ, ಕಾಂಗ್ರೆಸ್‌ನ ಕೇಂದ್ರ ನಾಯಕತ್ವವು ಈಗಾಗಲೇ ತನ್ನ ಕಾರ್ಯತಂತ್ರವನ್ನು ಬದಲಿಸುವ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವದಿಂದ ಪಕ್ಷವನ್ನು ಹೊರತರುವ ಯೋಜನೆಯನ್ನು ಜಾರಿಗೆ ತಂದಿರುವಂತೆ ಕಾಣುತ್ತಿದೆ.

ಜೂನ್ ಮೊದಲ ವಾರದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿದ ಬಳಿಕ ನಡೆದ ಹಲವು ಬೆಳವಣಿಗೆಗಳು, 2028ರ ಚುನಾವಣಾ ಕಾರ್ಯತಂತ್ರಕ್ಕಾಗಿ ಕಾಂಗ್ರೆಸ್ ಪಕ್ಷವು ಮಾಜಿ ಮುಖ್ಯಮಂತ್ರಿಯನ್ನು ಮೀರಿ ಯೋಚಿಸುತ್ತಿರುವುದನ್ನು ಸೂಚಿಸುತ್ತಿವೆ.

D K Shivakumar
ಸುಮ್ಮನಿರುವುದು ಎಂದರೆ ಮೌನವಾಗಿರುವುದು ಎಂದರ್ಥವಲ್ಲ: ಸಿದ್ದರಾಮಯ್ಯ

2006ರಲ್ಲಿ ಜನತಾ ದಳದಿಂದ ಹೊರಬಂದು ಕಾಂಗ್ರೆಸ್ ಸೇರಿದ ಬಳಿಕ ಸಿದ್ದರಾಮಯ್ಯ ಅವರು ಕರ್ನಾಟಕ ಕಾಂಗ್ರೆಸ್ ರಾಜಕೀಯದ ಕೇಂದ್ರಬಿಂದುವಾಗಿದ್ದಾರೆ. ಪಕ್ಷ ಸೇರಿದ ಕೆಲವೇ ದಿನಗಳಲ್ಲಿ ಅವರನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕರನ್ನಾಗಿ ನೇಮಿಸಲಾಯಿತು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯ ನಾಯಕರನ್ನು ಹಿಂದಿಕ್ಕಿ ಅವರು ಮುಖ್ಯಮಂತ್ರಿಯಾದರು. 2023ರಲ್ಲೂ ಇದೇ ಸಾಧನೆ ಪುನರಾವರ್ತಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು.

ಕಳೆದ ಎರಡು ದಶಕಗಳಲ್ಲಿ ಅವರು ರಾಜ್ಯದಲ್ಲಿ ಕಾಂಗ್ರೆಸ್‌ನ ಅತ್ಯಂತ ಪ್ರಭಾವಿ ಜನನಾಯಕನಾಗಿ ಹೊರಹೊಮ್ಮಿದರು. ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಬೆಂಬಲದ ನೆಲೆಯನ್ನು ಬಲಪಡಿಸುವ ಮೂಲಕ ತಮ್ಮದೇ ಆದ ರಾಜಕೀಯ ವರ್ಚಸ್ಸನ್ನು ನಿರ್ಮಿಸಿಕೊಂಡರು.

ಪಕ್ಷದಲ್ಲಿ ಅವರನ್ನು ‘ಹೊರಗಿನವರು’ ಎಂದು ಬಿಂಬಿಸುವ ಹಾಗೂ ತಮ್ಮದೇ ಬೆಂಬಲಿಗರ ವಲಯವನ್ನು ಬೆಳೆಸುತ್ತಿದ್ದಾರೆ ಎಂಬ ಆರೋಪಗಳನ್ನೂ ಅವರು ಎದುರಿಸಿದರು. ಕೆಲ ಸಂದರ್ಭಗಳಲ್ಲಿ ಅವರ ರಾಜಕೀಯ ಶೈಲಿಯೇ ಪಕ್ಷಕ್ಕಿಂತ ಹೆಚ್ಚು ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿತು. ಪಕ್ಷದ ಹೈಕಮಾಂಡ್‌ಗೆ ಹೋಲಿಸಿದರೆ ಅವರೇ ಹೆಚ್ಚು ಪ್ರಬಲ ನಾಯಕ ಎಂಬ ಭಾವನೆಯೂ ಮೂಡಿತ್ತು.

ಇದೀಗ ಪಕ್ಷ ಸೇರಿದ 20 ವರ್ಷಗಳ ಬಳಿಕ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವ ಕಾಂಗ್ರೆಸ್, ಅವರ ಪ್ರಭಾವಕ್ಕೂ ಮುನ್ನ ಇದ್ದ ರಾಜಕೀಯ ವ್ಯವಸ್ಥೆಯತ್ತ ಮರಳಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ಪ್ರಬಲ ಪ್ರಾದೇಶಿಕ ನಾಯಕನ ಸುತ್ತ ಪಕ್ಷದ ರಾಜಕೀಯ ಸೀಮಿತವಾಗದಂತೆ ನೋಡಿಕೊಳ್ಳುವುದರ ಜತೆಗೆ, ತಳಮಟ್ಟದಿಂದ ಪಕ್ಷದ ಸಂಘಟನೆಯನ್ನು ಬಲಪಡಿಸುವತ್ತ ಗಮನ ಹರಿಸಲಾಗುತ್ತಿದೆ.

ಸಚಿವ ಸಂಪುಟ ವಿಸ್ತರಣೆ, ಸಂಪುಟಕ್ಕೆ ಮಹಿಳೆಯನ್ನು ಸೇರ್ಪಡೆಗೊಳಿಸುವ ವಿಚಾರದಲ್ಲಿನ ಗೊಂದಲ ಹಾಗೂ ಖಾತೆಗಳ ಹಂಚಿಕೆ — ಇವೆಲ್ಲವೂ ಪಕ್ಷದೊಳಗಿನ ಬದಲಾವಣೆಯ ಸೂಚನೆಗಳಾಗಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಮುಖ ಶಕ್ತಿಯಾಗಿದ್ದ ಅಹಿಂದ ಅಂಶಕ್ಕೆ ಶಿವಕುಮಾರ್ ಅವರ ಸಚಿವ ಸಂಪುಟ ಹಾಗೂ ಪಕ್ಷದಲ್ಲಿ ಸಾಕಷ್ಟು ಪ್ರಾತಿನಿಧ್ಯ ನೀಡಲಾಗಿದೆ.

ಸಂಪುಟ ವಿಸ್ತರಣೆಯಿಂದ ಪಕ್ಷದೊಳಗೆ ಕೆಲವರ ಅಸಮಾಧಾನವೂ ಉಂಟಾಗಿದೆ. ಹಲವು ಜಿಲ್ಲೆಗಳು ಇನ್ನೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲದೆ ಉಳಿದಿವೆ. ಪಕ್ಷವು ತನ್ನ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ಹಿರಿಯ ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾವಣೆ ಮನವಿಗಳನ್ನು ಪರಿಗಣಿಸಲಾಗಿದೆ.

D K Shivakumar
ಮುಂಗಾರು ಅಧಿವೇಶನ ಆರಂಭ: ವಿಧಾನಸಭೆ ಹೊಸ್ತಿಲಿಗೆ, CM ಪೀಠಕ್ಕೆ ಶಿರಬಾಗಿ ನಮಸ್ಕರಿಸಿದ ಡಿ.ಕೆ ಶಿವಕುಮಾರ್

ಸಚಿವ ಸಂಪುಟಕ್ಕೆ ಸೇರ್ಪಡೆಯಾಗದೆ ಉಳಿದಿರುವ ಹೆಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ಎಂ. ಕೃಷ್ಣಪ್ಪ ಸೇರಿದಂತೆ ಹಿರಿಯ ನಾಯಕರನ್ನು ಸಮಾಧಾನಪಡಿಸಲು ಕೇಂದ್ರ ನಾಯಕರು ಪ್ರಯತ್ನಿಸಿದ್ದಾರೆ. ಆದರೆ ಸಚಿವ ಸಂಪುಟದಿಂದ ತಮ್ಮನ್ನು ಹೊರಗಿಟ್ಟಿರುವ ತಪ್ಪನ್ನು ಸರಿಪಡಿಸುವ ಭರವಸೆ ಮಾತ್ರ ಹಿರಿಯ ನಾಯಕರನ್ನು ತೃಪ್ತಿಪಡಿಸದೇ ಇರಬಹುದು. ಪಕ್ಷವು ನೀಡಿರುವ ಭರವಸೆಯನ್ನು ಕಾರ್ಯರೂಪಕ್ಕೆ ತರುವ ನಿರೀಕ್ಷೆ ಅವರದ್ದಾಗಿದೆ.

ಇನ್ನೊಂದು ಲೆಕ್ಕಾಚಾರದ ಹೆಜ್ಜೆಯಾಗಿ, ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದ ಮುಖವಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಬಿಂಬಿಸಲು ಪಕ್ಷ ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜಮೀರ್ ಅಹಮದ್ ಖಾನ್ ಅವರ ಬಳಿಯಿದ್ದ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆಗಳನ್ನು ಇದೀಗ ಖಾದರ್ ಅವರಿಗೆ ನೀಡಲಾಗಿದೆ.

ಸಿದ್ದರಾಮಯ್ಯ ಸರ್ಕಾರದಲ್ಲಿ 2018ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಜಮೀರ್ ಅಹಮದ್ ಖಾನ್ ಅವರು ಮುಸ್ಲಿಂ ಸಮುದಾಯದ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದರು. ಸಿದ್ದರಾಮಯ್ಯ ಅವರು ಜಮೀರ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು. ಆದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಳಿಕ ಈ ಪರಿಸ್ಥಿತಿ ಬದಲಾಗಿದೆ.

ಆ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರು ಕಾಂಗ್ರೆಸ್‌ನಿಂದ ಗಮನಾರ್ಹವಾಗಿ ದೂರ ಸರಿದ ಪರಿಣಾಮ, ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದರು. ಆ ಚುನಾವಣೆಯ ಬಳಿಕ ಪಕ್ಷವು ತನ್ನ ಕಾರ್ಯತಂತ್ರದಲ್ಲಿ ಬದಲಾವಣೆಗಳನ್ನು ಮಾಡಲು ಮುಂದಾಗಿದೆ ಎಂದು ಕಾಣುತ್ತಿದೆ.

ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ನಿರ್ಧಾರವೂ ಹೈಕಮಾಂಡ್‌ನ ಬದಲಾಗುತ್ತಿರುವ ಧೋರಣೆಯನ್ನು ಸೂಚಿಸುತ್ತದೆ. ಅಂತಿಮ ಪಟ್ಟಿಯನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ರಾಜಭವನಕ್ಕೆ ಕಳುಹಿಸುವವರೆಗೂ ಈ ನಿರ್ಧಾರದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.

ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ಶಾಸಕ ಬಸವರಾಜ ಶಿವಣ್ಣನವರ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದ್ದರು. ಕೊನೆಯ ಕ್ಷಣದ ಗೊಂದಲದಿಂದಾಗಿ ಶಾಂತೇಗೌಡ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿಲ್ಲ. ಹೀಗಾಗಿ ಸಚಿವ ಸಂಪುಟದಲ್ಲಿ ಮಹಿಳಾ ಪ್ರತಿನಿಧಿಯಿಲ್ಲದಂತಾಗಿದೆ.

ಒಟ್ಟು 34 ಸಚಿವ ಸ್ಥಾನಗಳ ಪೈಕಿ 33 ಸ್ಥಾನಗಳು ಭರ್ತಿಯಾಗಿದ್ದು, ಒಂದು ಸ್ಥಾನ ಮಾತ್ರ ಖಾಲಿ ಉಳಿದಿರುವ ಹಿನ್ನೆಲೆಯಲ್ಲಿ, ಮಹಿಳೆಯನ್ನು ಸಂಪುಟಕ್ಕೆ ಸೇರಿಸುವುದರ ಜತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯನ್ನೂ ಪರಿಗಣಿಸುವ ವಿಚಾರವನ್ನು ಕೇಂದ್ರ ನಾಯಕತ್ವ ಹೇಗೆ ನಿಭಾಯಿಸಲಿದೆ ಎಂಬುದು ಸ್ಪಷ್ಟವಾಗಿಲ್ಲ.

ಆಗಸ್ಟ್ 3ರಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ದರಾಮಯ್ಯ ಗೈರಾಗಿದ್ದು ಹಾಗೂ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರು ಮೌನ ವಹಿಸಿರುವುದು ಕುತೂಹಲ ಮೂಡಿಸಿದೆ. ಇದರಿಂದ ಪಕ್ಷವು ಸಿದ್ದರಾಮಯ್ಯ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಸಂದೇಶವೂ ವ್ಯಕ್ತವಾಗುತ್ತಿದೆ.

ಬಸವರಾಜ ಶಿವಣ್ಣನವರ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಿದ್ದರಾಮಯ್ಯ ಅವರ ಸಲಹೆಯನ್ನು ಪಕ್ಷದ ಹೈಕಮಾಂಡ್ ಪರಿಗಣಿಸದಿರುವುದು, ಮಾಜಿ ಮುಖ್ಯಮಂತ್ರಿಯ ವಿಚಾರದಲ್ಲಿ ಕಾಂಗ್ರೆಸ್‌ನ ಧೋರಣೆ ಬದಲಾಗಿರುವುದಕ್ಕೆ ಸ್ಪಷ್ಟ ಸೂಚನೆ ಎಂದು ರಾಜಕೀಯ ವಿಶ್ಲೇಷಕ ಪ್ರೊ. ಹರೀಶ್ ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯನ್ನೂ ಕಾಂಗ್ರೆಸ್ ಪರಿಗಣಿಸಿರಬಹುದು. ವಯಸ್ಸು ಹಾಗೂ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದ್ದರು.

ಆದರೆ ರಾಜಕೀಯದಲ್ಲಿ ಅನಿಶ್ಚಿತತೆ ಅತ್ಯಂತ ಪ್ರಬಲ ಅಂಶವಾಗಿದೆ. 2018ರಲ್ಲೂ ಸಿದ್ದರಾಮಯ್ಯ ಅವರು ಅದೇ ಚುನಾವಣೆ ತಮ್ಮ ಕೊನೆಯ ಚುನಾವಣೆಯಾಗಲಿದೆ ಎಂದು ಹೇಳಿದ್ದರು. ಆ ಬಳಿಕ ನಡೆದದ್ದು ಈಗ ಇತಿಹಾಸ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com