

ಮಂಡ್ಯ: ನಾವು ಆತ್ಮಪೂರ್ವಕವಾಗಿ ರಾಜಕೀಯ ಶಕ್ತಿಯನ್ನು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಧಾರೆ ಎರೆದು ಗೆಲ್ಲಿಸಿಕೊಂಡು ಬಂದಿದ್ದೇವೆ. ಆದರೆ ಅದನ್ನು ಮರೆತು ನಮ್ಮ ಕಾರ್ಯಕರ್ತರಿಗೆ ಕಾಟ ಕೊಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣ ಗೌಡ ಆರೋಪಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ವರಿಷ್ಠರ ಮನವಿಗೆ ಒಟ್ಟಾಗಿ ಇದ್ದೆವು. ನಮಗೆ ನೋವು ಇತ್ತು. ಶಕ್ತಿ ತುಂಬಿ ಚುನಾವಣೆ ಮಾಡಿದ್ದೆವು. ಕುಮಾರಸ್ವಾಮಿ ಸ್ಪಂದಿಸುವ ಕೆಲಸವನ್ನು ಮಾಡುತ್ತಿಲ್ಲ. ನಾವೇ ಒಂದು ತಂಡ ಕಟ್ಟಿಕೊಂಡು ರಾಷ್ಟ್ರೀಯ ನಾಯಕರನ್ನು ಶೀಘ್ರದಲ್ಲಿ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು. ಜೆಡಿಎಸ್ ಕಾರ್ಯಕರ್ತರ ಕಿತಾಪತಿ ನಿಲ್ಲಿಸಬೇಕು. ಕೆ.ಆರ್. ಪೇಟೆಯಲ್ಲಿ ನಾನು ತಂದ ಅನುದಾನಕ್ಕೆ ಪೂಜೆ ಮಾಡುತ್ತಿದ್ದಾರೆ.
ಈಗಿರುವ ಶಾಸಕರ ಹತ್ತಿರ ನಮ್ಮ ಕಾರ್ಯಕರ್ತರನ್ನು ಕಳುಹಿಸಿದರೆ ಶಾಲು ಹಾರ ಹಾಕಿ ಪಾರ್ಟಿಗೆ ಸೇರಿಸಿಕೊಳ್ಳುತ್ತಾರೆ. ನಾನು ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡೋದನ್ನು ನಿಲ್ಲಿಸಬೇಕು ಎಂದು ಖಾರವಾಗಿ ನುಡಿದರು. ನಮ್ಮ ಪಕ್ಷದ ಗೌರವಕ್ಕಾಗಿ ಬಾಯಿ ಮುಚ್ಚಿಕೊಂಡು ಇದ್ದೇವೆ. ಇಲ್ಲ ಬೇರೆ ರೀತಿ ಬ್ಲಾಸ್ಟ್ ಮಾಡುತ್ತಿದ್ದೆ. ನಿಮ್ಮ ತಂದೆ ಗೆಲುವಿಗೆ ಎಷ್ಟು ಕಷ್ಟ ಪಟ್ಟಿದ್ದೀವಿ ಎನ್ನುವುದನ್ನು ನಿಖಿಲ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.
ಇನ್ನೂ ಇದೇ ವೇಳೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರ ಇರಬೇಕೋ ಬೇಡವೋ ಎನ್ನುವುದನ್ನು ರಾಷ್ಟ್ರ ನಾಯಕರು ತೀರ್ಮಾನ ಮಾಡುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ನಷ್ಟೇ ಬಿಜೆಪಿಯೂ ಬಲಿಷ್ಠವಾಗಿದೆ. ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರೋಣ ಎಂದಿದ್ದಾರೆ.
ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ತಾ.ಪಂ, ಗ್ರಾ.ಪಂ. ಚುನಾವಣೆ ಬಗ್ಗೆ ಕಾರ್ಯಕರ್ತರಿಗಾಗಿ ಪಕ್ಷ ಸಂಘಟನೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಜೊತೆಗೆ ಮಂಡ್ಯದಲ್ಲಿಯೂ ಮಾಡಿಕೊಂಡು ಚುನಾವಣೆ ಸಿದ್ಧತೆ ಬಗ್ಗೆ ಹೇಳಲಾಗುತ್ತಿದೆ ಎಂದರು. ಮೈತ್ರಿ ತೀರ್ಮಾನ ಈ ಸಭೆಯಲ್ಲಿ ತೀರ್ಮಾನ ಆಗುವುದಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಈ ಮೈತ್ರಿ ವಿಚಾರ ಚರ್ಚೆ ಅಂತಿಮವಾಗುತ್ತದೆ. ಬಿಜೆಪಿಗೆ ಪ್ರತಿ ಬೂತ್‌ನಲ್ಲಿ ತನ್ನದೇ ಆದ ಛಾಪು-ಶಕ್ತಿ ಇದೆ. ಹಿಂದೆ ಹಾಗೂ ಇಂದಿನ ಸ್ಥಿತಿ ಬೇರೆ ಬೇರೆ ಇದೆ. ನಾವೆಲ್ಲರೂ ಬಿಜೆಪಿಗೆ ಶಕ್ತಿಯಾಗಿದ್ದೇವೆ ಎಂದು ತಿಳಿಸಿದರು.
2028ರ ಚುನಾವಣೆಯಲ್ಲಿ ಎಚ್ಟಿ ಮಂಜು ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಇತ್ತೀಚೆಗೆ ಕೆಆರ್ ಪೇಟೆಯಲ್ಲಿ ನಿಖಿಲ್ ಮನವಿ ಮಾಡಿದ್ದರು. ಈ ವಿಚಾರ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರ ನಿಖಿಲ್ ಅವರಿಗೆ ಇಲ್ಲ ಎಂದು ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ನಿರಂತರವಾಗಿ ಸೋಲು ಅನುಭವಿಸಿರುವ ನಾಯಕರು. ಮೊದಲಿಗೆ ತಮ್ಮ ರಾಜಕೀಯ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳಲಿ ಎಂದು ಬಿಜೆಪಿ ನಾಯಕರು ಸವಾಲು ಹಾಕಿದ್ದಾರೆ. ಏತನ್ಮಧ್ಯೆ, ನಿಖಿಲ್ ಅವರಿಂದ ಅಂಥ ಹೇಳಿಕೆಗಳು ಮುಂದುವರಿದರೆ ಮೈತ್ರಿ ಸಂಬಂಧಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
Advertisement