

ದೆಹಲಿ: ಎತ್ತಿನಹೊಳೆ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಲಿ ಇನ್ನೊಂದು ವರ್ಷದಲ್ಲಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಹರಿಸದಿದ್ದರೆ ಆನಂತರ ಮಾತನಾಡಿ. ಈ ರಾಜ್ಯಕ್ಕೆ ಅವರು ಯಾವ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸವಾಲು ಹಾಕಿದರು.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಭಾಗವಹಿಸಿದ ನಂತರ ಕರ್ನಾಟಕ ಭವನದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿದರು.
ಎತ್ತಿನಹೊಳೆ ಯೋಜನೆ ಯಶಸ್ಸಾಗುವುದಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಎತ್ತಿನಹೊಳೆ ಯೋಜನೆ ಅವರು ಪ್ರಾರಂಭ ಮಾಡಿದ ಯೋಜನೆ ಅಲ್ಲವಲ್ಲ ಅದು. ಅದಕ್ಕೆ ಅವರು ಮೊದಲಿನಿಂದಲೂ ಇದರ ಹೀಗೆ ಹೇಳುತ್ತಲೇ ಇದ್ದಾರೆ. ಬರೀ ತಪ್ಪು ಕಂಡುಹಿಡಿಯುವುದೇ ಅವರ ಕೆಲಸ. ನಾವು ಮಾಡಿದ್ದು ಸರಿಯಿಲ್ಲ, ಹಾಗಾದರೆ ಅವರು ಏನು ಮಾಡಿದ್ದಾರೆ ಎಂದು ಹೇಳಲಿ.
ನಾವು ನೀರನ್ನು ಹೊರತಂದಿದ್ದೇವೆ. ಯಶಸ್ಸು ಆಗುತ್ತದೆಯೋ ಬಿಡುತ್ತದೆಯೋ ಅದು ನಂತರದ್ದು. ಜನತಾದಳ, ಅವರಿಗೆ ಅವರ ತಂದೆಯವರಿಗೆ ಸಿಕ್ಕಂತಹ ಅವಕಾಶದಲ್ಲಿ ಏನು ಮಾಡಿದ್ದಾರೆ ಎಂದು ತಿಳಿಸಲಿ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಬಯಲುಸೀಮೆಯ ಕೆರೆಗಳನ್ನು ತುಂಬಿಸಿ ಕುಡಿಯಲು ಹಾಗೂ ಅಂತರ್ಜಲ ಹೆಚ್ಚಿಸಲು ಕೆಲಸ ಮಾಡುತ್ತಿದ್ದೇವೆ" ಎಂದರು.
ಒಂದೆರಡು ದಿನ ಹಾಸಿಗೆ, ದಿಂಬು, ಮಂಚ ಎತ್ತಿಕೊಂಡು ಹೋಗಿ ಒಂದೆರಡು ಮನೆಗಳಲ್ಲಿ ಮಲಗಿದ್ದು ಬಿಟ್ಟರೆ ಬೇರೇನೂ ಕಾಣಲಿಲ್ಲ. ಜನ ನೆನಪು ಮಾಡಿಕೊಳ್ಳುವ ಯಾವುದಾದರೂ ಒಂದು ಯೋಜನೆ ಹೆಸರು ಇದ್ದರೆ ಮಾತನಾಡಲಿ. ನೀವು (ಮಾಧ್ಯಮಗಳು) ಯಾವುದಾದರೂ ಇದ್ದರೆ ನನಗೆ ನೆನಪು ಮಾಡಿ. ಇಂತಹ ಕೆಲಸ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿ" ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರೇ ಕೇಂದ್ರ ಸಚಿವರ ಜೊತೆ ಕುಳಿತುಕೊಂಡು ಸಭೆ ಮಾಡಿಸಲಿ. ಅವರೂ ಈಗ ಕೇಂದ್ರ ಸಚಿವರಲ್ಲವೇ? ಬರೀ ಮಾತನಾಡಿದರೆ ಕೆಲಸ ಆಗುತ್ತದೆಯೇ? ನಾನು ಎಷ್ಟು ಬಾರಿ ಸಭೆಗೆ ಬಂದಿದ್ದೇನೆ, ಸಭೆ ಕರೆದಿದ್ದೇನೆ, ಕೇಳಿದ್ದೇನೆ. ಆಂಧ್ರ ಮುಖ್ಯಮಂತ್ರಿ ತುಂಗಭದ್ರಾ ವಿಚಾರದಲ್ಲಿ ಸಭೆ ನಡೆಸಲು ತಯಾರಿಲ್ಲ. ಏಕೆ ಇವರು ಆ ಸರ್ಕಾರದ ವಿರುದ್ಧ ದನಿ ಎತ್ತಬಾರದು.
ಮಹದಾಯಿ, ಕೃಷ್ಣ ನೋಟಿಫಿಕೇಷನ್ ಮಾಡಿಸಲಿ. ಅವರಿಗೆ ಕೃಷ್ಣಾ ನೀರಿನ ಸಮಸ್ಯೆ ಗೊತ್ತಿಲ್ಲವೇ. ಬರೀ ಮಾತನಾಡುತ್ತಾರೆ. ಮೇಕೆದಾಟು ವಿಚಾರದಲ್ಲಿ ನಮಗೆ ಸುಪ್ರೀಂ ಕೋರ್ಟ್ ಅಲ್ಲಿ ನ್ಯಾಯ ಸಿಕ್ಕಿದೆ" ಎಂದರು.
ಮೇಕೆದಾಟು ಯೋಜನೆಗೆ ಏನೇನು ಬೇಕೋ ಅದೆಲ್ಲವನ್ನು ತಯಾರು ಮಾಡುತ್ತಿದ್ದೇವೆ. ಅರಣ್ಯ ಪ್ರದೇಶಕ್ಕೆ ಬದಲಿ ಭೂಮಿ ನೀಡುವ ಬಗ್ಗೆ ವ್ಯವಸ್ಥೆ ಮಾಡಲಾಗಿದೆ. ಕಚೇರಿ ತೆರೆಯಲಾಗಿದೆ. ಮಂಡ್ಯ ಜಿಲ್ಲಾಧಿಕಾರಿಯನ್ನು ಮುಖ್ಯಸ್ಥರನ್ನಾಗಿಸಲಾಗಿದೆ. ಬೇರೆ ಇತರೇ ಕೆಲಸಗಳಿಗೆ ತಂಡ ನೇಮಕ ಮಾಡಲಾಗುತ್ತಿದೆ" ಎಂದರು.
"ಅಸ್ಸಾಂ ರಾಜ್ಯದ ಅಧ್ಯಕ್ಷರು ಸೇರಿದಂತೆ ಅಲ್ಲಿನ ಎಲ್ಲಾ ನಾಯಕರು ಒಟ್ಟಾಗಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅಸ್ಸಾಂನ ಆಡಳಿತ ಪಕ್ಷ ಸಾಕಷ್ಟು ಯೋಜನೆಗಳನ್ನ ದುರುಪಯೋಗ ಪಡಿಸಿಕೊಂಡಿದೆ. ಆದರೂ ಅಲ್ಲಿನ ಜನ ಬದಲಾವಣೆ ಬಯಸಿದ್ದಾರೆ. ವಾತಾವರಣ ನೋಡುತ್ತಿದ್ದರೆ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬರುತ್ತದೆ ಎನ್ನುವ ಆತ್ಮವಿಶ್ವಾಸವಿದೆ" ಎಂದರು.
ಅಸ್ಸಾಂ ರಾಜ್ಯದ ಚುನಾವಣೆ ಕುರಿತಾಗಿ ನಾನು ಹಾಗೂ ಭೂಪೇಶ್ ಭಘೇಲ ಅವರು ಸೇರಿದಂತೆ ಸಂಬಂಧಪಟ್ಟ ನಾಯಕರು ಒಂದು ಸುತ್ತಿನ ಮಾತುಕಥೆ ನಡೆಸಿದ್ದೇವೆ. ಅಸ್ಸಾಂ ರಾಜ್ಯಕ್ಕೆ ಸಂಬಂಧಿಸಿದಂತೆ ಸಮೀಕ್ಷೆಗಳು ಹಾಗೂ ಇತರೇ ವಿಚಾರಗಳನ್ನು ಅಧ್ಯಯನ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಒಂದಷ್ಟು ರೂಪುರೇಷೆಗಳನ್ನು ನಾವು ಮಾಡಿಕೊಂಡಿದ್ದೇವೆ. ನಮಗೆ ಭರವಸೆಯಿದೆ" ಎಂದರು.
ಹೈಕಮಾಂಡ್ ನಾಯಕರನ್ನು ಭೇಟಿಯಾಗುವಿರಾ ಎಂದು ಕೇಳಿದಾಗ, "ಅದರ ಬಗ್ಗೆ ತಿಳಿಸುವೆ. ನನ್ನ ಸಭೆಗಳು ಮೊದಲು ಮುಗಿಯಬೇಕು. ಬುಧವಾರದಂದು ಕಾನೂನು ತಂಡದೊಟ್ಟಿಗೆ ಸಭೆಯಿದೆ. ಏಕೆಂದರೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಸುಮಾರು 1 ಲಕ್ಷ ಕೋಟ ಹಣ ಉಳಿತಾಯವಾಗಿದೆ. ಇಲ್ಲದಿದ್ದರೆ ಈ ಹಣ ದುರುಪಯೋಗವಾಗುತ್ತಿತ್ತು. ಹೀಗಾಗಿ ನೀರಾವರಿ ಯೋಜನೆಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಲಾಗುವುದು" ಎಂದರು.
Advertisement