

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ಧವಾಗಿರುವ ನಡುವೆಯೇ, ಕಾಂಗ್ರೆಸ್‌ನಲ್ಲಿ ನಾಯಕತ್ವ ಪೈಪೋಟಿ ಮತ್ತೆ ಮುನ್ನೆಲೆಗೆ ಬಂದಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೂರು ದಿನಗಳ ಕಾಲ ದೆಹಲಿಯಲ್ಲಿ ಮೊಕ್ಕಾಂ ಹೂಡಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಇಂಬು ನೀಡಿದೆ.
ಪಕ್ಷದ ಮೂಲಗಳ ಪ್ರಕಾರ, ಬಜೆಟ್ ನಂತರ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ, ವಿಶೇಷವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರೊಂದಿಗೆ ಸಭೆ ನಡೆಸಿ ಬಹು ಕಾಲದಿಂದ ಬಾಕಿಯಿರುವ ಸಚಿವ ಸಂಪುಟ ಪುನಾರಚನೆಗೆ ಅನುಮತಿ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಹೈಕಮಾಂಡ್‌ನಿಂದ ಅಧಿಕಾರ ಹಂಚಿಕೆ ಕುರಿತು ಸ್ಪಷ್ಟತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು ಹೈಕಮಾಂಡ್ ತೀರ್ಮಾನವನ್ನು ಗೌರವಿಸುವುದಾಗಿ ಪುನರುಚ್ಛರಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಕೂಡ “ಸಮಯವೇ ಎಲ್ಲವುದಕ್ಕೂ ಉತ್ತರ ನೀಡಲಿದೆ” ಎಂದು ಹೇಳಿದ್ದು, ಈ ಮೂಲಕ ಅಧಿಕಾರ ಹಂಚಿಕೆ ಕುರಿತ ಭರವಸೆ ಇನ್ನೂ ಜೀವಂತವಿದೆ ಎಂಬ ಸುಳಿವನ್ನು ನೀಡಿದ್ದಾರೆ.
ಈ ನಡುವೆ ಡಿಕೆ. ಶಿವಕುಮಾರ್ ಬಣದ ನಾಯಕರು ನಾಯಕತ್ವ ಬದಲಾವಣೆ ವಿಚಾರವನ್ನು ಮತ್ತೆ ಎತ್ತಿದ್ದು, ಹೈಕಮಾಂಡ್ ಸ್ಪಷ್ಟ ತೀರ್ಮಾನ ಕೈಗೊಳ್ಳುವವರೆಗೂ ಒತ್ತಡ ಮುಂದುವರಿಸಲು ಯತ್ನ ನಡೆಸುತ್ತಿದೆ.
ಪಕ್ಷದ ಒಳಗಿನ ಕೆಲವು ನಾಯಕರ ಅಸಮಾಧಾನವನ್ನು ಬಳಸಿಕೊಂಡು ತಮ್ಮ ಬಣವನ್ನು ಬಲಪಡಿಸಲು ಪ್ರಯತ್ನ ನಡೆಸುತ್ತಿದ್ದಾರೆಂದು ಪಕ್ಷದ ಒಳ ಮೂಲಗಳು ಮಾಹಿತಿ ನೀಡಿವೆ.
ಇದೇ ವೇಳೆ, ಸಚಿವ ಸಂಪುಟದಿಂದ ವಜಾಗೊಳಿಸಿದಾಗ ಸಿದ್ದರಾಮಯ್ಯ ಅವರು ತಮ್ಮನ್ನು ರಕ್ಷಿಸದ ಕಾರಣ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅತೃಪ್ತರಾಗಿದ್ದು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗುವ ಅವರ ಆಕಾಂಕ್ಷೆಗೆ ಸಿಎಂ ಇನ್ನೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಅಲ್ಲದೆ, ಇತ್ತೀಚೆಗೆ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಸಮುದಾಯದ ಮಠದ ಕಾರ್ಯಕ್ರಮಕ್ಕೆ ರಾಜಣ್ಣ ಹಾಜರಾಗಲಿಲ್ಲ, ಆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿರುವುದು ಕಂಡು ಬಂದಿತ್ತು. ಇದು ಸಿದ್ದರಾಮಯ್ಯ ಅವರು ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗಿರುವ ಸೂಚನೆಯನ್ನು ನೀಡಿದಂತಾಗಿದೆ.
ಇದಲ್ಲದೆ, ಸಿಎಂ ಪುತ್ರ ಕಾಂಗ್ರೆಸ್ ಎಂಸಿಎಲ್ ಡಾ. ಯತೀಂದ್ರ ಅವರನ್ನು ಹೊರತುಪಡಿಸಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಂತಹ ಬೇರೆ ಯಾವುದೇ ಪ್ರಮುಖ ನಾಯಕರು ಸಿದ್ದರಾಮಯ್ಯ ಅವರು ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂದು ಪ್ರತಿಪಾದಿಸುತ್ತಿಲ್ಲ. ಇದರಿಂದ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗುವ ಲಕ್ಷಣಗಳನ್ನು ಪ್ರದರ್ಶಿಸುತ್ತಿರುವುದು ಕಂಡು ಬರುತ್ತಿದೆ.
ರಾಹುಲ್ ಗಾಂಧಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇ ಆದರೆ, ಅದು ರಾಜಕೀಯವಾಗಿ ಮಹತ್ವದ ತಿರುವಾಗಬಹುದು. ಶಿವಕುಮಾರ್ ಅವರು ತಮಗೆ ಹೆಚ್ಚಿನ ಶಾಸಕರ ಬೆಂಬಲವಿದೆ ಎಂದು ಹೇಳಿದ್ದು, ಫೆಬ್ರವರಿ 16 ನಂತರ ತಮ್ಮ ಧ್ವನಿ ಮತ್ತಷ್ಟು ತೀವ್ರಗೊಳಿಸುವ ಯೋಜನೆ ರೂಪಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ, ಸಿದ್ದರಾಮಯ್ಯ ಪಾಳಯದ ಸುಮಾರು 25 ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿರುವುದು ಊಹಾಪೋಹಗಳು ಹೆಚ್ಚಾಗುವಂತೆ ಮಾಡಿದೆ. ಏತನ್ಮಧ್ಯೆ ಇದರಲ್ಲಿ ಡಿ.ಕೆ. ಶಿವಕುಮಾರ್ ಪಾತ್ರವಿಲ್ಲ ಎಂದು ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಇನ್ನು ದೆಹಲಿಯಲ್ಲಿರುವ ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಅವರು, ಗುರುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದು, ರಾಹುಲ್ ಗಾಂಧಿಯವರ ಭೇಟಿಯು ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರು ದೆಹಲಿಯ ಪ್ರವಾಸವನ್ನು ರಾಜಕೀಯವಾಗಿ ವ್ಯಾಖ್ಯಾನಿಸುವ ಅಗತ್ಯವಿಲ್ಲ ಎಂದು ಹೇಳಿದ್ದು, ಎಲ್ಲ ಅಂತಿಮ ನಿರ್ಧಾರವೂ ಹೈಕಮಾಂಡ್ ಕೈಯಲ್ಲಿದೆ ಎಂದು ಪುನರುಚ್ಚರಿಸಿದ್ದಾರೆ.
Advertisement