

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಯುತ್ತಿರುವ ಸಿಎಂ ಕುರ್ಚಿ ಕಾದಾಟ ನಡುವೆಯೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಸ, ಸಮಯವೇ ಎಲ್ಲಕ್ಕೂ ಉತ್ತರ ನೀಡುತ್ತದೆ ಎಂದು ಹೇಳಿದ್ದಾರೆ.
ಮುಂದಿನ ಅಸ್ಸಾಂ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸಲು ಕಳೆದ ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಇರುವ ಡಿ ಕೆ ಶಿವಕುಮಾರ್, ತಮ್ಮ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಇತ್ತೀಚೆಗೆ ನೀಡಿದ ಹೇಳಿಕೆ ಕುರಿತು ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಿದ್ದರು.
ಡಿ.ಕೆ. ಸುರೇಶ್ ಅವರು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ನಡೆದಿದೆ ಎಂದು ಹೇಳಲಾಗುತ್ತಿರುವ ಅಧಿಕಾರ ಹಂಚಿಕೆ ಒಪ್ಪಂದವನ್ನು ಸಿದ್ದರಾಮಯ್ಯ ಗೌರವಿಸುತ್ತಾರೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, “ಸಮಯವೇ ಎಲ್ಲವನ್ನೂ ಹೇಳುತ್ತದೆ. ಸಿದ್ದರಾಮಯ್ಯ ಅವರೊಂದಿಗೆ ನಡೆದ ನಮ್ಮ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಏನು ಚರ್ಚೆಯಾಯಿತು ಎಂಬುದು ನನಗೆ ಮಾತ್ರ ಗೊತ್ತು. ಈ ವಿಷಯವನ್ನು ಸಾರ್ವಜನಿಕವಾಗಿ ಹೆಚ್ಚು ಮಾತನಾಡಲು ನಾನು ಬಯಸುವುದಿಲ್ಲ,” ಎಂದು ಹೇಳಿದರು.
ಇದೇ ವೇಳೆ, ಡಿ ಕೆ ಶಿವಕುಮಾರ್ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ ಎಂಬ ವರದಿಗಳೂ ಬಂದಿದ್ದವು. ಆದರೆ, ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನಾಯಕರ ಭೇಟಿಗೆ ಸಮಯ ಕೇಳಿರುವುದನ್ನು ನಿರಾಕರಿಸಿದರು.
ಅಸ್ಸಾಂ ಚುನಾವಣೆಗೆ ಸಂಬಂಧಿಸಿದ ಇನ್ನೊಂದು ಸಭೆಯಲ್ಲಿ ಭಾಗವಹಿಸಿದ ಬಳಿಕ ಇಂದು ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ಮರಳುವುದಾಗಿ ತಿಳಿಸಿದರು.
ಖರ್ಗೆ, ವೇಣುಗೋಪಾಲ್ ಭೇಟಿ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಅವರು ನಿನ್ನೆ ರಾತ್ರಿ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು.
ಸಹೋದರರು ಖರ್ಗೆ ಮತ್ತು ವೇಣುಗೋಪಾಲ್ ಅವರೊಂದಿಗೆ ಮುಚ್ಚಿದ ಬಾಗಿಲಿನ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಪ್ರತ್ಯೇಕವಾಗಿ ಸುಮಾರು 1 ಗಂಟೆ ಕಾಲ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.
Advertisement