

ಬೆಂಗಳೂರು: ರಾಜ್ಯ ಕಾಂಗ್ರೆಸ್ ಶಾಸಕರು ದಿನ ಬೆಳಗಾದರೇ ಅಧಿಕಾರ ಹಸ್ತಾಂತರ, ಕುರ್ಚಿ ಕಿತ್ತಾಟದ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ನೀಡುತ್ತಿದ್ದು, ಶಾಸಕರ ವರ್ತನೆಗೆ ಗೃಹ ಸಚಿವ ಪರಮೇಶ್ವರ್ ಗರಂ ಆಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಬಾಯಿ ಮುಚ್ಚಿಕೊಂಡಿರಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕಿಂತ ಕಠಿಣವಾಗಿ ಹೇಳೋದಿಕ್ಕೆ ಅವರಿಗೆ ಸಾಧ್ಯವಿಲ್ಲ. ಅಷ್ಟು ಹೇಳಿದಮೇಲೂ ಶಾಸಕರು ಪದೇ ಪದೇ ಮಾತನಾಡುತ್ತಿದ್ದಾರೆ. ಇದು ಯಾಕೋ ಸರಿ ಕಾಣಿಸುತ್ತಿಲ್ಲ ಎಂದು ಗುಡುಗಿದರು.
ಎಐಸಿಸಿ ಅಧ್ಯಕ್ಷರು ಹೇಳಿದ್ದಾಯಿತು, ಸಿಎಂ, ಡಿಸಿಎಂ ಕೂಡ ಹೇಳಿದ್ದಾಯ್ತು ಆದರೂ ಶಾಸಕರು ಹೇಳಿಕೆಗಳನ್ನು ಕೊಡುತ್ತಲೇ ಇರುವುದು ಸರಿಯಲ್ಲ. ನಮಗೆ ಮಾಡಲು ಸಾಕಷ್ಟು ಕೆಲಸಗಳಿವೆ. ದಿನ ಬೆಳಗಾದರೇ ಇದನ್ನೇ ಹೇಳುತ್ತಿರುವುದರಲ್ಲಿ ಅರ್ಥವಿಲ್ಲ. ಎನಫ್ ಈಸ್ ಎನಫ್. ಮತ್ತೆ ಅದನ್ನು ಮುಂದುವರೆಸಬಾರದು ಎಂದರು.
ಜನ ನಮ್ಮನ್ನು ಆಯ್ಕೆ ಮಾಡಿ ಕಳಿಸಿರುವುದು ಯಾಕೆ? ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಬಿಟ್ಟು ದಿನಕ್ಕೊಂದು ಹೇಳಿಕೆ ಕೊಡುತ್ತಾ ಇರುವುದು ಸರಿಯಲ್ಲ ಎಂದು ಹೇಳಿದರು. ಜನರು ನಮ್ಮಿಂದೆ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷಿಸುತ್ತಿದ್ದಾರೆ, ಅದರ ಕಡೆ ನಮ್ಮ ಗಮನವಿರಬೇಕು ಎಂದರು.
ಇದನ್ನೆಲ್ಲ ಹೈಕಮಾಂಡ್ ಗಮನಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಸೂಕ್ತ ಸಮಯದಲ್ಲಿ, ನಾನು ಈ ವಿಷಯದಲ್ಲಿ ಹೈಕಮಾಂಡ್ ಜೊತೆಯೂ ಮಾತನಾಡುತ್ತೇನೆ. ಏಕೆಂದರೆ, ಇದು ನಿಲ್ಲಬೇಕು. ಜನರು ನಮ್ಮನ್ನು ನೋಡುತ್ತಿದ್ದಾರೆ... ಅವರ ನಿರೀಕ್ಷೆಗಳು ವಿಭಿನ್ನವಾಗಿವೆ. ನಾವು ಅಭಿವೃದ್ಧಿಯತ್ತ ಗಮನ ಹರಿಸಬೇಕು" ಎಂದು ಅವರು ಹೇಳಿದರು. ಯಾವಾಗ ಏನು ಮಾಡಬೇಕೆಂದು ಹೈಕಮಾಂಡ್‌ಗೆ ತಿಳಿದಿದೆ ಮತ್ತು ಅವರು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಇಂತಹ ಪರಿಸ್ಥಿತಿ ಹೈಕಮಾಂಡ್‌ಗೆ ಹೊಸದಲ್ಲ? ಅವರು ಹಿಂದೆ, ಅಂತಹ ಸಂದರ್ಭಗಳು ಉದ್ಭವಿಸಿದಾಗಲೆಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಕರ್ನಾಟಕದಲ್ಲಿಯೂ ಸಹ, ಹಿಂದೆ ಇಂತಹ ಘಟನೆಗಳು ನಡೆದಿವೆ. ನಾವು ತಾಳ್ಮೆಯಿಂದಿರಬೇಕು ಎಂದಿದ್ದಾರೆ.
Advertisement