

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಸಿಎಂ ಗಾದಿಗಾಗಿ ಕಲಹ ನಡೆಯುತ್ತಿರುವ ನಡುವೆ, ಎರಡೂ ಬಣಗಳು ರಾಜ್ಯದ ಸಹಕಾರಿ ವಲಯವನ್ನು ನಿಯಂತ್ರಿಸಲು ಉತ್ಸುಕವಾಗಿವೆ.
ಇದರಿಂದ ದೇಶದ ಮೊದಲ ಸಹಕಾರ ಸಚಿವರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಅವಕಾಶವನ್ನು ನೀಡುತ್ತದೆ. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಈ ಕ್ಷೇತ್ರದ ನಾಯಕರು ನಿಯಮಿತವಾಗಿ ಭೇಟಿಯಾಗುತ್ತಾರೆ ಎಂದು ರಾಜಕೀಯ ವಿಶ್ಲೇಷಕರು ಗಮನಿಸಿದ್ದಾರೆ.
ಇತ್ತೀಚೆಗೆ, ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಎಂಎಲ್‌ಸಿ ಪುತ್ರ ಆರ್. ರಾಜೇಂದ್ರ, ಕರ್ನಾಟಕದ ಕ್ರಿಬ್‌ಎಚ್‌ಸಿಒ (ಕೃಷಿ ಭಾರತಿ ಸಹಕಾರಿ ಲಿಮಿಟೆಡ್) ನಿರ್ದೇಶಕರಾಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಮತ್ತು ಕರ್ನಾಟಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಚುನಾವಣೆಗಳು ಸಿಎಂ ಮತ್ತು ಡಿಸಿಎಂ ಕ್ಯಾಂಪ್ ಗಳ ನಡುವಿನ ಜಗಳವನ್ನು ತೀವ್ರಗೊಳಿಸುತ್ತಿವೆ. ಕೆಎಂಎಫ್ ಅಧ್ಯಕ್ಷರ ಚುನಾವಣೆ ಮಾರ್ಚ್ 6 ರಂದು, ಸಿಎಂ ಬಜೆಟ್ ಮಂಡಿಸುವ ದಿನ ನಡೆಯಲಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ ಮತ್ತು ಬೆಂಗಳೂರಿನ ಮಾಜಿ ಸಂಸದ ಡಿಕೆ ಸುರೇಶ್ ಕೆಎಂಎಫ್ ಮುಖ್ಯಸ್ಥ ಹುದ್ದೆಗೆ ಸ್ಪರ್ಧೆಯಲ್ಲಿದ್ದಾರೆ. ಬಮೂಲ್-ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ಅಧ್ಯಕ್ಷರಾಗುವ ಮೂಲಕ ಅವರು ಈಗಾಗಲೇ ಸಹಕಾರಿ ಕ್ಷೇತ್ರಕ್ಕೆ ಎಂಟ್ರಿ ನೀಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಭದ್ರ ಕೋಟೆಯಾಗಿದ್ದ ಈ ವಲಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಇದರ ಉದ್ದೇಶವಾಗಿದೆ. ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಮತ್ತು ದೇವೇಗೌಡರ ಪುತ್ರ ಎಚ್.ಡಿ. ರೇವಣ್ಣ ಹಲವು ಅವಧಿಗೆ ಈ ಹುದ್ದೆಯನ್ನು ಅಲಂಕರಿಸಿದ್ದರು. ಮಾಲೂರು ಶಾಸಕ ಕೆ.ವೈ. ನಂಜೇಗೌಡ ಕೂಡ ಪ್ರಬಲ ಸ್ಪರ್ಧಿಯಾಗಿದ್ದು, ಡಿಕೆ ಸಹೋದರರು ಈ ಹಿಂದೆ ತಮಗೆ ಈ ಹುದ್ದೆಯ ಭರವಸೆ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬ ಆಕಾಂಕ್ಷಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರಿಗೆ ಸಿಎಂ ಅವರ ಬಲವಾದ ಬೆಂಬಲವಿದೆ.
ಮುಖ್ಯಮಂತ್ರಿ ಎರಡು ಸುತ್ತಿನ ಮಾತುಕತೆ ನಡೆಸಿದ ನಂತರವೂ ಎರಡೂ ಕ್ಯಾಂಪ್ ಗಳು ಒಮ್ಮತಕ್ಕೆ ಬರದ ಕಾರಣ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಅಪೆಕ್ಸ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರು 18 ನಿರ್ದೇಶಕರಲ್ಲಿ ಬಹುಪಾಲು ಜನರ ಬೆಂಬಲವನ್ನು ಹೊಂದಿರುವುದರಿಂದ ಅವರು ಪ್ರಬಲ ಸ್ಪರ್ಧಿಯಾಗಿ ಮುಂದುವರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿವಕುಮಾರ್ ಅವರ ಸೋದರ ಸಂಬಂಧಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ರವಿ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ರಾಜಣ್ಣ ಸಚಿವರಾಗಿದ್ದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ತಮ್ಮ ಮಹತ್ವಾಕಾಂಕ್ಷೆಯನ್ನು ತ್ಯಾಗ ಮಾಡುವುದಾಗಿ ಮಾತು ನೀಡಿದ್ದರು ಎಂದು ಕಾಂಗ್ರೆಸ್‌ನ ಹಿರಿಯ ಶಾಸಕರೊಬ್ಬರು ತಿಳಿಸಿದ್ದಾರೆ.
ಆದರೆ ಬದಲಾದ ಪರಿಸ್ಥಿತಿಯಲ್ಲಿ, ಸಂಪುಟದಿಂದ ವಜಾಗೊಳಿಸಿದ ನಂತರ ರಾಜಣ್ಣ ಬಿಟ್ಟುಕೊಡಲು ಸಿದ್ಧರಿಲ್ಲ. ಕಾಂಗ್ರೆಸ್ ಹೈಕಮಾಂಡ್ ರಾಜಣ್ಣ ವಿರುದ್ಧ ಸ್ಪರ್ಧಿಸಲು ಸೂಚಿಸಿಗದರೆ, ತಟಸ್ಥ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಾರೆ.
ಎಪಿಎಂಸಿ ಸಚಿವ ಶಿವಾನಂದ ಪಾಟೀಲ್, ಅವರ ದೀರ್ಘಕಾಲದ ಸ್ನೇಹಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರ ಹೆಸರುಗಳು ಸಹ ಕೇಳಿಬರುತ್ತಿವೆ. ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಹೆಸರು ಚರ್ಚೆಗೆ ಗ್ರಾಸವಾಗಿದ್ದರೂ, ಹೈಕಮಾಂಡ್ ಬೆಂಬಲ ಪಡೆಯುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಪಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸಿದರೆ ಎರಡೂ ಬಣಗಳು ಹುದ್ದೆಗಳನ್ನು ಬದಲಾಯಿಸಿಕೊಳ್ಳಬಹುದು ಎಂಬ ಮಾತು ಕೇಳಿ ಬರುತ್ತಿದೆ.
Advertisement