

ಬೆಂಗಳೂರು: ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ತಂಗಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಷ್ಠರಾಗಿರುವ ಶಾಸಕರು ಲಗುಬಗೆಯಿಂದ ಯೋಜಿಸಿದ್ದ ವಿದೇಶ ಪ್ರವಾಸಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಇದರಿಂದ ಪಕ್ಷದೊಳಗೆ ವಿವಾದ ಎದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಡಿ ಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಪಾಳಯದ ಯೋಜನೆಗೆ ಅಡ್ಡಿಯಾದ ಮೊದಲ ಘಟನೆ ಇದೇನಲ್ಲ. ಈ ಹಿಂದೆ ಮುಖ್ಯಮಂತ್ರಿ ಸಲಹೆಯ ಮೇರೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ನಡೆಸಲು ಉದ್ದೇಶಿಸಿದ್ದ ಎಸ್‌ಸಿ/ಎಸ್‌ಟಿ ಶಾಸಕರ ಸಭೆಯನ್ನೂ ಅವರು ತಡೆದಿದ್ದರು.
ಸಿದ್ದರಾಮಯ್ಯ ಪಾಳಯದ ಶಾಸಕರು ವಿದೇಶ ಪ್ರವಾಸವನ್ನು ಯೋಜಿಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಡಿ ಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದು, ಈ ವಿಷಯವನ್ನು ಮಾಧ್ಯಮಗಳ ಮೂಲಕವೇ ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದರು.
ವಿದೇಶ ಪ್ರವಾಸಕ್ಕೆ ಡಿಕೆಶಿ ಕತ್ತರಿ?
ಶಾಸಕ ಸಿ. ಪುಟ್ಟರಂಗ ಶೆಟ್ಟಿ ಮತ್ತು ಮುಖ್ಯಮಂತ್ರಿ ಆಪ್ತರೆಂದು ಪರಿಗಣಿಸಲ್ಪಡುವ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು, ಪಕ್ಷದ 22 ಶಾಸಕರಿಗಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸವನ್ನು ಸಂಯೋಜಿಸಿದ್ದರು.
ಆದರೆ, ವೆಂಕಟೇಶ್ ಅವರು ಮೊನ್ನೆ ಗುರುವಾರ, ಈ ಪ್ರವಾಸವನ್ನು ತಾವು ಅಥವಾ ತಮ್ಮ ಇಲಾಖೆ ಆಯೋಜಿಸಿಲ್ಲ ಎಂದು ಹೇಳಿದ್ದರು. ಮೂಲಗಳ ಪ್ರಕಾರ, ಕರ್ನಾಟಕದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಭಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಡಿ ಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ಸಂದೇಶ ರವಾನಿಸಿದ ನಂತರ ವೆಂಕಟೇಶ್ ಅವರು ವಿದೇಶ ಪ್ರವಾಸದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ವೆಂಕಟೇಶ್ ಅವರ ಕರೆಗೆ ಅನುಗುಣವಾಗಿ ವಿದೇಶ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದ ಶಾಸಕರಲ್ಲಿ ಎಚ್.ಡಿ. ತಮ್ಮಯ್ಯ, ಹಂಪನಗೌಡ ಬದಾರ್ಲಿ, ಯಶವಂತರಾಯಗೌಡ ವಿ. ಪಾಟೀಲ, ಬಿ.ಎಂ. ನಾಗರಾಜ್, ಜೆ.ಟಿ. ಪಾಟೀಲ, ಅಲ್ಲಮಪ್ರಭು ಪಾಟೀಲ, ಸಿ. ಪುಟ್ಟರಂಗ ಶೆಟ್ಟಿ, ಬಸನಗೌಡ ದದ್ದಲ್, ಎ.ಆರ್. ಕೃಷ್ಣಮೂರ್ತಿ, ಬಸನಗೌಡ ತುರವಿಹಳ್ಳ, ಬಿ. ದೇವೇಂದ್ರಪ್ಪ, ಅನಿಲ್ ಚಿಕ್ಕಮಧು, ರಘುಮೂರ್ತಿ ಮತ್ತು ಕೆ. ಶಿವಕುಮಾರ್ ಇದ್ದರು. ಹೈಕಮಾಂಡ್ ಹಾಗೂ ಡಿ ಕೆ ಶಿವಕುಮಾರ್ ಅವರ ಅಸಮಾಧಾನಕ್ಕೆ ಗುರಿಯಾಗುವ ಭೀತಿಯಿಂದ ಇವರಲ್ಲಿ ಕೆಲವರು ಈ ಪ್ರವಾಸದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನು ಕೆಲವರು ಮಾತ್ರ ಪ್ರವಾಸಕ್ಕೆ ಹೋಗಲು ಮುಂದಾಗುತ್ತಿದ್ದಾರಂತೆ. ಹೈಕಮಾಂಡ್ ಆದೇಶವನ್ನು ಉಲ್ಲಂಘಿಸಿದಂತಾಗಬಾರದೆಂದು, ಅವರು ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸುತ್ತಿದ್ದು, ವಿದೇಶದಲ್ಲಿರುವ ತಮ್ಮ ಬಂಧುಗಳನ್ನು ಭೇಟಿ ಮಾಡುವ ಯೋಜನೆ ಹೊಂದಿದ್ದಾರೆ ಎಂದು ಒಬ್ಬರು ಶಾಸಕರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡುವ ವೇಳೆ ತಿಳಿಸಿದ್ದಾರೆ.
ಇವರಿಗೆ ಈಗಾಗಲೇ ಕಾರ್ಯಾಲಯದಿಂದ ನೋ-ಆಬ್ಜೆಕ್ಷನ್ ಪ್ರಮಾಣಪತ್ರ (NOC) ದೊರೆತಿದ್ದು, ಫೆಬ್ರವರಿ 17ರಂದು ಪ್ರಯಾಣ ಬೆಳೆಸಿ, ಮಾರ್ಚ್ 3ರಂದು ಮರಳುವ ನಿರೀಕ್ಷೆಯಿದೆ. ಮಾರ್ಚ್ 6ರಂದು ಮುಖ್ಯಮಂತ್ರಿ ಬಜೆಟ್ ಮಂಡಿಸುವುದಕ್ಕಿಂತ ಮೂರು ದಿನಗಳ ಮುಂಚೆಯೇ ಶಾಸಕರು ಹಿಂದಿರುಗಲಿದ್ದಾರೆ.
ಒಬ್ಬ ಕಾಂಗ್ರೆಸ್ ನಾಯಕರು, ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನುದಾನ ತರಲು ಮತ್ತು ಕೆಲವು ಯೋಜನೆಗಳನ್ನು ಮುಂದೂಡಲು ಪ್ರಯತ್ನಿಸಬೇಕಾಗಿರುವ ಸಂದರ್ಭದಲ್ಲಿ ವಿದೇಶ ಪ್ರವಾಸಕ್ಕೆ ಹೋಗುವುದು ಅನವಶ್ಯಕ ಎಂದು ಶಾಸಕರು ಈ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಇದು ಖಾಸಗಿ ಪ್ರವಾಸ. ಇದು ಅಧಿಕೃತ ಅಧ್ಯಯನ ಪ್ರವಾಸವಾಗಿದ್ದರೆ, ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಅಧಿಕಾರಿಗಳ ಮೂಲಗಳು ಹೇಳುತ್ತವೆ.
Advertisement