RSS ನಿಂದಿಸುವುದು, ಹಿಂದೂ ಧರ್ಮ ಅವಹೇಳನ ಮಾಡುವುದು ಕಾಂಗ್ರೆಸ್ ಪಕ್ಷದ Hidden Agenda..!

ರಾಷ್ಟ್ರ ವಿರೋಧಿ ಶಕ್ತಿಗಳನ್ನು ಸಂತೃಪ್ತಿಪಡಿಸಲು ಹಾಗೂ ಹಿಂದೂ ಧರ್ಮವನ್ನು ಅವಮಾನಿಸಲು ಪ್ರಿಯಾಂಕ್ ಆರ್‌ಎಸ್‌ಎಸ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ರಾಷ್ಟ್ರ ಭಕ್ತ ಸಂಘಟನೆ ʼರಾಷ್ಟ್ರೀಯ ಸ್ವಯಂಸೇವಕ ಸಂಘʼವನ್ನು ನಿಂದಿಸುವುದು, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಹಿಂದೂಪರ ಕಾರ್ಯಕರ್ತರು ಹಾಗೂ ದಾರ್ಶನಿಕರನ್ನು ಗುರಿಯಾಗಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ 'Hidden Agenda' ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.

ರಾಷ್ಟ್ರೀಯ ಸ್ವಯಂಸೇವಾ ಸಂಘ (RSS) ದೆವ್ವವಿದ್ದಂತೆ. ಬಿಜೆಪಿ ದೆವ್ವದ ನೆರಳು. ನಾವು ನೆರಳಿನ ಜೊತೆ ಹೋರಾಟ ಮಾಡುವುದಕ್ಕಿಂತ ದೆವ್ವದ ಜೊತೆ ಹೋರಾಟ ಮಾಡಬೇಕು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ರಾಷ್ಟ್ರ ವಿರೋಧಿ ಶಕ್ತಿಗಳನ್ನು ಸಂತೃಪ್ತಿಪಡಿಸಲು ಹಾಗೂ ಹಿಂದೂ ಧರ್ಮವನ್ನು ಅವಮಾನಿಸಲು ಪ್ರಿಯಾಂಕ್ ಆರ್‌ಎಸ್‌ಎಸ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪ್ರಿಯಾಂಕ್ ಖರ್ಗೆಯವರ ಕೊಡೆಯನ್ನು ಪ್ರಶ್ನಿಸಿದರು.

ಐದು ದಶಕಗಳ ಕಾಲ ಅಧಿಕಾರದಲ್ಲಿದ್ದರೂ, ಈ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಕೆಲಸವಾಗಿಲ್ಲ. ಪ್ರಾದೇಶಿಕ ಅಸಮತೋಲನ ವರದಿ ಪ್ರಕಾರ ಹಿಂದುಳಿದ ತಾಲ್ಲೂಕುಗಳ ಸಂಖ್ಯೆ ಹೆಚ್ಚಾಗಿದೆ. ಸಚಿವರಾಗಿ ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ಸುದ್ದಿಯಾಗುವ ಸಲುವಾಗಿ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಹಿಂದೂ ಸಂಸ್ಕೃತಿ ಮತ್ತು ಸಂಸ್ಥೆಗಳನ್ನು ಗುರಿಯಾಗಿಸಲು ಪ್ರಿಯಾಂಕ್ ಖರ್ಗೆ ಅಂತಹವರನ್ನು ವಕ್ತಾರರನ್ನಾಗಿ ಮಾಡಿದೆ ಎಂದು ಟೀಕಿಸಿದರು.

ಇದೇ ವೇಳೆ ಕರಾವಳಿ ಕರ್ನಾಟಕದಲ್ಲಿ ಕೋಮು ಉದ್ವಿಗ್ನತೆಯಿಂದಾಗಿ ಐಟಿ ಮತ್ತು ಬಿಟಿ ಕಂಪನಿಗಳು ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ ಎಂದು ಹೇಳಿಕೆ ನೀಡಿದ್ದಕ್ಕೆ ಪ್ರಿಯಾಂಕ್ ಖರ್ಗೆಯವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

Priyank Kharge
RSS ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಐಟಿ-ಬಿಟಿ ಸಚಿವರು ಈ ಪ್ರದೇಶದ ಜನರನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.

ಬೆಂಗಳೂರು ಹೊರತುಪಡಿಸಿ, ಕರಾವಳಿ ಜಿಲ್ಲೆಗಳು ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಸೇರಿವೆ. ಕೋಮು ಪರಿಸ್ಥಿತಿಯಿಂದಾಗಿ ಕರಾವಳಿ ಕರ್ನಾಟಕಕ್ಕೆ ಐಟಿ-ಬಿಟಿ ಉದ್ಯಮ ಬಂದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ, ಆದರೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಐಟಿ-ಬಿಟಿ ಉದ್ಯಮ ಏಕೆ ಕಾಣೆಯಾಗಿದೆ ಎಂಬುದನ್ನು ಅವರು ವಿವರಿಸಲಿ ಎಂದು ಹೇಳಿದರು.

ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಪರಿಸ್ಥಿತಿ ಶೋಚನೀಯವಾಗಿದೆ, ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಶೇಕಡಾ 48 ಮತ್ತು ಪಿಯುಸಿ ಉತ್ತೀರ್ಣ ಶೇಕಡಾ 49 ರಷ್ಟಿದೆ. ಇನ್ನು ಮೂಲಸೌಕರ್ಯ ಸ್ಥಿತಿಯ ಬಗ್ಗೆ ಹೇಳುವಂತೆಯೇ ಇಲ್ಲ, ಇದು ತುಂಬಾ ಕಳಪೆಯಾಗಿದೆ ಎಂದು ತಿಳಿಸಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಾತನಾಡಿ, “ಪ್ರಿಯಾಂಕ್ ದಿನನಿತ್ಯ ಆರ್‌ಎಸ್‌ಎಸ್‌ನ್ನು ನಿಂದಿಸುವ ಮೂಲಕ ಹೈಕಮಾಂಡ್‌ನ್ನು ಸಂತೃಪ್ತಿಪಡಿಸಿ ಉತ್ತಮ ಸ್ಥಾನ ಪಡೆಯಬಹುದು ಎಂಬ ಭ್ರಮೆಯಲ್ಲಿದ್ದಾರೆ. ಕಲ್ಯಾಣ ಕರ್ನಾಟಕದ ಜನರ ವಿಶ್ವಾಸಕ್ಕೆ ಅವರು ದ್ರೋಹ ಮಾಡಿದ್ದಾರೆ” ಎಂದು ಆರೋಪಿಸಿದರು.

ವಿಧಾನಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್. ರವಿ ಕುಮಾರ್ ಅವರು ಮಾತನಾಡಿ, ಪ್ರಿಯಾಂಕ್ ಖರ್ಗೆ ಕಾಂಗ್ರೆಸ್‌ನಲ್ಲಿ ತನ್ನ ಸ್ಥಾನ ಬಲಪಡಿಸಲು ಆರ್‌ಎಸ್‌ಎಸ್‌ ವಿಷಯವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಆದರೆ, “ಆರ್‌ಎಸ್‌ಎಸ್‌ಗೆ ಪ್ರಿಯಾಂಕ್ ಖರ್ಗೆ ಹೇಳಿಕೆಗಳಿಂದ ಯಾವುದೇ ಪರಿಣಾಮ ಬೀರಲ್ಲ. ಅವರು ಆರ್‌ಎಸ್‌ಎಸ್‌ ವಿರುದ್ಧ ಅನಾವಶ್ಯಕವಾಗಿ ಮಾತನಾಡುವುದರಿಂದ ಜನರ ಮುಂದೆ ಹಾಸ್ಯಾಸ್ಪದ ವ್ಯಕ್ತಿಯಾಗುತ್ತಿದ್ದಾರೆಂದು ವ್ಯಂಗ್ಯವಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com