

ಬೆಂಗಳೂರು: ದಲಿತ ಸಮುದಾಯ ಮತ್ತು SCSP-TSP ಯೋಜನೆಗೆ ಸಂಬಂಧಿಸಿದಂತೆ, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ರಾಜ್ಯ ಐಟಿಬಿಟಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್’ರಾಜ್ ಖಾತೆಯ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಟ್ವೀಟ್ ಸಮರ ನಡೆದಿದೆ.
ನನ್ನನ್ನು ಕೆಣಕಿದರೆ ಕುಟುಕದೆ ಬಿಡುವುದಿಲ್ಲ ಎನ್ನುವ ಛಲವಾದಿ ಎಚ್ಚರಿಕೆಗೆ, ರಾಜೀನಾಮೆ ಮಾತ್ರ ಕೊಡಿ ಸಾಕು, ರಾಜಕೀಯ ನಿವೃತ್ತಿ ಘೋಷಿಸಬೇಕಿಲ್ಲ. ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ ಸಾಕು ರಾಜಕೀಯ ನಿವೃತ್ತಿಯು ನಿಮಗೆ ಅನಿವಾರ್ಯವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ದಲಿತತ್ವವನ್ನು ತಮಗೆ ಅನುಕಂಪದ ಕಾರ್ಡ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ನಾವು ಹಾಗಲ್ಲ, ಅದನ್ನು ನಾವು ಸ್ವಾಭಿಮಾನವಾಗಿ ಮತ್ತು ಒಂದು ಹೋರಾಟವನ್ನಾಗಿ ಕಾಣುತ್ತೇವೆ. ಇದನ್ನೇ ನಮಗೆ ಬಾಬಾ ಸಾಹೇಬರು ಹೇಳಿಕೊಟ್ಟಿದ್ದು ಎಂದು ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ, ವಿಪಕ್ಷದ ನಾಯಕರ ವಿರುದ್ದ ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ ಗೂಗಲ್ ಬೇಬಿ
ಸಚಿವರನ್ನು ಛಲವಾದಿ ನಾರಾಯಣಸ್ವಾಮಿ ’ಗೂಗಲ್ ಬೇಬಿ’ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಛಲವಾದಿ ನಾರಾಯಣಸ್ವಾಮಿ ಆಗಿದ್ದವರು, ಬಿಜೆಪಿಗೆ ಹೋದ ಮೇಲೆ, ಅವಕಾಶವಾದಿ ನಾರಾಯಣಸ್ವಾಮಿ ಆಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.
ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿರುವ ಬಿಜೆಪಿ ವಂಶಪಾರಂಪರ್ಯ ರಾಜಕಾರಣಿಗಳ ಪಟ್ಟಿ :
ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್
ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ
ಶಾಸಕ ಅರವಿಂದ್ ಬೆಲ್ಲದ್
ಸಂಸದರಾದ ಬಿವೈ ರಾಘವೇಂದ್ರ
ಸಂಸದರಾದ ತೇಜಸ್ವಿ ಸೂರ್ಯ
ಸಂಸದರು ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಶಾಸಕ ಕುಮಾರ್ ಬಂಗಾರಪ್ಪ
ಶಾಸಕರಾದ ಎಸ್.ರಘು
ಬಿಜೆಪಿ ನಾಯಕ ನಿಖಿಲ್ ಕಟ್ಟಿ
ಬಿಜೆಪಿ ನಾಯಕ ಪ್ರದೀಪ ಶೆಟ್ಟರ್
ಬಿಜೆಪಿ ನಾಯಕ ಅವಿನಾಶ್ ಜಾಧವ್
ಬಿಜೆಪಿ ನಾಯಕ ಸಪ್ತಗಿರಿ ಗೌಡ
ಪ್ರಿಯಾಂಕ್ ಖರ್ಗೆ ತಿರುಗೇಟು
ನಿಮ್ಮನ್ನು ಜೀರೋದಿಂದ ಹೀರೋ ಮಾಡಿದ್ದು ಕಾಂಗ್ರೆಸ್ ಪಕ್ಷ, ಹೀರೋ ಆದ ಮೇಲೆಯೇ ಬಿಜೆಪಿ ನಿಮ್ಮನ್ನು ಕರೆದುಕೊಂಡಿದ್ದೇ ಹೊರತು ಬಿಜೆಪಿ ನಿಮ್ಮನ್ನು ಜೀರೋದಿಂದ ಬೆಳೆಸಿಲ್ಲ. ನಾನು ಎಲೆಕ್ಟೆಡ್ ರಾಜಕಾರಿಣಿ, ನೀವು ಸದ್ಯಕ್ಕೆ ಸೆಲೆಕ್ಟೆಡ್ ರಾಜಕಾರಿಣಿ, ಹೆಬ್ಬಾಳ ಕ್ಷೇತ್ರದಲ್ಲಿ ಜನರಿಂದ ತಿರಸ್ಕೃತರಾಗಿದ್ದ ತಾವು ಒಮ್ಮೆಯಾದರೂ ಎಲೆಕ್ಟೆಡ್ ರಾಜಕಾರಿಣಿಯಾಗಿ, ನಂತರ ನನ್ನ ಬಗ್ಗೆ ಮಾತನಾಡುವಿರಂತೆ ಎಂದು ಪ್ರಿಯಾಂಕ್ ಖರ್ಗೆ, ಛಲವಾದಿ ನಾರಾಯಣಸ್ವಾಮಿಗೆ ತಿರುಗೇಟು ನೀಡಿದ್ದಾರೆ.
Advertisement