ಗೃಹಲಕ್ಷ್ಮಿ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿ: ಹನುಮಮ್ಮನವರ ಹೆಸರನ್ನೇಕೆ ಬಳಸಿಕೊಳ್ಳುತ್ತೀದ್ದೀರಿ..? ಫೆಬ್ರವರಿ-ಮಾರ್ಚ್ ತಿಂಗಳ ಹಣದ ಲೆಕ್ಕ ಕೊಡಿ..!
ಬೆಂಗಳೂರು: ಗೃಹಲಕ್ಷ್ಮಿ ಹಣ ಕೂಡಿಟ್ಟು ರಾಯಚೂರು ಮಹಿಳೆ ಫ್ರಿಡ್ಜ್ ಖರೀದಿಸಿದ್ದಾರೆಂದು ಹೇಳಿ ಲೆಕ್ಕ ಮರೆಸಬೇಡಿ. ಕಳೆದ ವರ್ಷದ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಮಹಿಳೆಯರ ಖಾತೆಗೆ ಜಮೆ ಆಗದ ಹಣದ ಲೆಕ್ಕ ಕೊಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಆಗ್ರಹಿಸಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ, ಫ್ರಿಡ್ಜ್ ತೋರಿಸಿ ಲೆಕ್ಕ ಮರೆಸಬೇಡಿ ಕಳೆದ ವರ್ಷದ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಮಹಿಳೆಯರ ಖಾತೆಗೆ ಜಮೆ ಆಗದ 5,000 ಕೋಟಿ ಎಲ್ಲಿಗೆ ಹೋಯಿತು ಎನ್ನುವುದನ್ನು ಬಹಿರಂಗಪಡಿಸಿ ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
5,000 ಕೋಟಿ ಗುಳುಂ ಮಾಡಿ ಫ್ರಿಡ್ಜ್ ತೋರಿಸಿ ನಾಟಕವಾಡುವುದು ರಾಜ್ಯದ ಮಹಿಳೆಯರಿಗೆ ಮಾಡುವ ಅವಮಾನ. ನುಡಿದಂತೆ ನಡೆದಿದ್ದೇವೆ ಎನ್ನುವ ಧೈರ್ಯ ನಿಮಗಿದ್ದರೆ, ಮೊದಲು ಆ 5,000 ಕೋಟಿಯ ಲೆಕ್ಕ ಕೊಡಿ ಎಂದು ಒತ್ತಾಯಿಸಿದೆ.
ನಿನ್ನೆಯಷ್ಟೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆ ಕೇವಲ ಆರ್ಥಿಕ ನೆರವಲ್ಲ, ಅದು ಗ್ರಾಮೀಣ ಮಹಿಳೆಯರ ಕನಸುಗಳಿಗೆ ಜೀವ ನೀಡುವ ಶಕ್ತಿ ಎಂಬುದಕ್ಕೆ ಸಿಂಧನೂರಿನ ಹನುಮಮ್ಮನವರೇ ಸಾಕ್ಷಿ ಎಂದು ಹೇಳಿದ್ದರು.
ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ನಿವಾಸಿ ಹನುಮಮ್ಮ ಅವರು ಪ್ರತಿ ತಿಂಗಳು ಬರುತ್ತಿದ್ದ 2,000 ರೂ. ಹಣವನ್ನು ಕೂಡಿಟ್ಟು, ಇಂದು ತಮ್ಮ ಮನೆಗೆ ಹೊಸ ಫ್ರಿಡ್ಜ್ ಖರೀದಿಸಿದ್ದಾರೆ. ಸಣ್ಣ ಉಳಿತಾಯದ ಮೂಲಕ ದೊಡ್ಡ ಬದಲಾವಣೆ ತಂದ ಹನುಮಮ್ಮನವರ ಈ ಸಾಧನೆ ಕೋಟ್ಯಂತರ ಮಹಿಳೆಯರಿಗೆ ಸ್ಫೂರ್ತಿ. ರಾಜ್ಯದ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ ಸ್ವತಂತ್ರರಾಗಬೇಕು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ನಮ್ಮ ಸರ್ಕಾರದ ಆಶಯ ಇಂದು ಹಳ್ಳಿ ಹಳ್ಳಿಗಳಲ್ಲಿ ಸಾಕಾರಗೊಳ್ಳುತ್ತಿದೆ. ಹನುಮಮ್ಮ ಅವರ ಮುಖದ ಈ ನಗು ನಮಗೆ ಮತ್ತಷ್ಟು ಕೆಲಸ ಮಾಡಲು ಸ್ಫೂರ್ತಿ ನೀಡಲಿದೆ. ನುಡಿದಂತೆ ನಡೆದಿದ್ದೇವೆ, ಮಹಿಳೆಯರ ಬಾಳಿನಲ್ಲಿ ಹೊಸ ಬೆಳಕು ತಂದಿದ್ದೇವೆಂದು ತಿಳಿಸಿದ್ದರು.

