

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಕೋಗಿಲುನಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಮನೆಗಳನ್ನು ಒದಗಿಸುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಸೋಮವಾರ ಪ್ರತಿಭಟನೆ ನಡೆಸಿತು.
ಬಾಗಲೂರು ಮುಖ್ಯ ರಸ್ತೆಯ ಕಂಟ್ರಿ ಕ್ಲಬ್ ಬಳಿ "ಕೋಗಿಲು ಉಳಿಸಿ, ಅಕ್ರಮ ವಲಸಿಗರನ್ನು ಹೊರ ಹಾಕಿ" ಎಂಬ ಘೋಷಣೆಯಡಿಯಲ್ಲಿ ಬಿಜೆಪಿ ಇಂದು ಪ್ರತಿಭಟನೆ ನಡೆಸಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಇತರ ಬಿಜೆಪಿ ಶಾಸಕರು, ಎಂಎಲ್‌ಸಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಆರ್ ಅಶೋಕ, ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳಿಗೆ ವಂಚಿಸಿ, ಅಕ್ರಮ ವಲಸಿಗರಿಗೆ ಮನೆಗಳನ್ನು ನೀಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಕರ್ನಾಟಕದ ಭೂಮಿಯನ್ನು ರಕ್ಷಿಸುವ ಗುರಿಯನ್ನು ಈ ಪ್ರತಿಭಟನೆ ಹೊಂದಿದೆ. ರಾಜ್ಯದ ಜನರಿಗೆ ಮಾತ್ರ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಕೋಗಿಲುವಿನ ಪ್ರತಿಭಟನಾ ಸ್ಥಳದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, ಇದು ಅನ್ಯಾಯ ಎಂದು ಪ್ರತಿಪಕ್ಷದ ನಾಯಕ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕರ್ನಾಟಕದ ಭೂಮಿಯನ್ನು ರಕ್ಷಿಸಲು ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅಶೋಕ ಹೇಳಿದರು.
Advertisement