

ಬೆಂಗಳೂರು: ಕೋಗಿಲು ನಿರಾಶ್ರಿತರಿಗೆ ಮಾನವೀಯತೆಯ ದೃಷ್ಟಿಯಿಂದ ಮನೆಗಳನ್ನು ನೀಡುವ ನಿರ್ಧಾರಕ್ಕೆ ಜನರು ಹಾಗೂ ವಿಪಕ್ಷಗಳ ವಿರೋಧ ಹಾಗೂ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೀಗ ವಿರೋಧ-ಟೀಕೆಗಳಿಗೆ ಮಣಿದಿದ್ದು, ಮನೆ ಹಂಚಿಕೆ ನಿರ್ಧಾರಕ್ಕೆ ತಡೆ ನೀಡಿದೆ.
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಕಟ್ಟಡಗಳ ತೆರವು ಮಾಡಿದ್ದು, ಟೀಕೆಗೊಳಗಾದ ಬೆನ್ನಲ್ಲೇ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಆಶ್ರಯ ಯೋಜನೆ ಅಡಿ ಮನೆ ನೀಡುವುದಾಗಿ ಸರ್ಕಾರ ಹೇಳಿತ್ತು. ಅದರಂತೆ, ಜನವರಿ 2ಕ್ಕೆ ಮನೆ ಹಂಚಿಕೆ ಆಗಲಿದೆ ಎಂದೂ ಹೇಳಲಾಗಿತ್ತು. ಇದಕ್ಕೆ ತೀವ್ರ ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗಿದ್ದವು.
ಅಲ್ಪಸಂಖ್ಯಾತ ಸಮುದಾಯವನ್ನು ಸಮಾಧಾನಪಡಿಸಲು ಸರ್ಕಾರ ಅಕ್ರಮ ಬಾಂಗ್ಲಾದೇಶಿ ಮುಸ್ಲಿಮರು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಿಂದ ವಲಸೆ ಬಂದವರಿಗೆ ಮನೆಗಳನ್ನು ಮಂಜೂರು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಕೇರಳದ ಒತ್ತಡಕ್ಕೆ ಮಣಿಯುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಸತಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು, ಫಲಾನುಭವಿಗಳ ದಾಖಲೆಗಳ ಪರಿಶೀಲನೆಯ ನಂತರ ಶುಕ್ರವಾರ ಮನೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಜಿಬಿಎ ಮತ್ತು ರಾಜೀವ್ ಗಾಂಧಿ ವಸತಿ ನಿಗಮವು ದಾಖಲೆಗಳನ್ನು ಪರಿಶೀಲಿಸಿ ಬೈಯಪ್ಪನಹಳ್ಳಿಯಲ್ಲಿರುವ ಕರ್ನಾಟಕ ವಸತಿ ಮಂಡಳಿಯ ಕ್ವಾರ್ಟರ್ಸ್‌ಗಳಲ್ಲಿ ಅರ್ಹರಿಗೆ ಮಾತ್ರ ವಸತಿ ಒದಗಿಸಲಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ 'ದುಡಿಯೋ ಜನರ ವೇದಿಕೆ'ಯ ಸಾಮಾಜಿಕ ಕಾರ್ಯಕರ್ತರು, ನಿರಾಶ್ರಿತರ ಪರವಾಗಿ ನಿಂತಿದ್ದು, 2012 ರಲ್ಲಿ ಫಕೀರ್ ಲೇಔಟ್‌ನಲ್ಲಿ ಮನೆಗಳಿದ್ದ ಗೂಗಲ್ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಮನೆಗಳು ನಿರ್ಮಾಣಗೊಂಡಿರುವುದಲ್ಲ. ಆಗಿನ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದ ಗೌಡ ಅವರ ಆಡಳಿತಾವಧಿಯಲ್ಲೂ ಇಲ್ಲಿ ಮನೆಗಳಿದ್ದವು ಎಂದು ಹೇಳಿದ್ದಾರೆ.
30 ವರ್ಷಗಳ ಹಿಂದೆಯೇ ಇವರು ಇಲ್ಲಿಗೆ ಬಂದಿದ್ದು, ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಗಳನ್ನು ಪಡೆದಿದ್ದಾರೆ. ಇದೀಗ ದಾಖಲೆ ಹೊಂದಿರುವ ಕರ್ನಾಟಕ ನಿವಾಸಿಗಳಾಗಿದ್ದಾರೆಂದು ವೇದಿಕೆಯ ಕಾರ್ಯಕರ್ತ ಮನೋಹರ್ ಎಳವರ್ತಿಯವರು ತಿಳಿಸಿದ್ದಾರೆ.
Advertisement