

ಬೆಂಗಳೂರು: ಕುಮಾರಸ್ವಾಮಿ ಯಾವಾಗಲೋ ಬರುತ್ತಾರೆ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಹೋಗುತ್ತಾರೆ. ಅವರು ಗಂಭೀರ ರಾಜಕಾರಣ ಮಾಡುವವರಲ್ಲ. ಮಾಧ್ಯಮಗಳ ಮುಂದೆ ಮಾತ್ರ ರಾಜಕಾರಣ ಮಾಡುವವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜನಾರ್ಧನ ರೆಡ್ಡಿ ಅವರು ಅಮೆರಿಕಾದಿಂದ ಬೇಕಾದರೂ ಭದ್ರತೆ ತೆಗೆದುಕೊಳ್ಳಲಿ ಎಂಬ ನಿಮ್ಮ ಹೇಳಿಕೆಗೆ ಗ್ರೇಟ್ ಡಿಸಿಎಂ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಗಮನ ಸೆಳೆದಾಗ, ನಾವು ಯಾರಿಗೆ ಭದ್ರತೆ ಕೊಡಬೇಕು? ಯಾವ ಕಾರಣಕ್ಕೆ ಭದ್ರತೆ ನೀಡಬೇಕು ಎಂದು ಆ ಲೆ ಮಾತನಾಡೋಣ. ಈ ವಿಚಾರವಾಗಿ ಗೃಹ ಸಚಿವರು ಉತ್ತರ ನೀಡುತ್ತಾರೆ. ನಾನು ಯಾರಿಗೂ ಉತ್ತರ ನೀಡುವುದಿಲ್ಲ. ನಾನು ಕೂಡ ಬಳ್ಳಾರಿಗೆ ಹೋಗುತ್ತಿದ್ದೇನೆಂದು ಹೇಳಿದರು.
ನಮ್ಮ ಕಾರ್ಯಕರ್ತ ಸತ್ತಿದ್ದಾನೆ. ನಾನು ಪಕ್ಷದ ಸಮಿತಿಯಿಂದ ಮಾಹಿತಿ ಪಡೆದಿದ್ದೇನೆ. ಅಧಿಕೃತವಾಗಿ ವರದಿ ನೀಡಬೇಕಿದೆ. ನಾನು ಕುಮಾರಸ್ವಾಮಿ ಹಾಗೂ ಇತರರ ಹೇಳಿಕೆಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಅವರು ತಮ್ಮ ಖುಷಿಗೆ ಏನಾದರೂ ಹೇಳಿಕೊಳ್ಳಲಿ. ಕುಮಾರಸ್ವಾಮಿ ಅವರು ಬರುತ್ತಾರೆ, ಮಾತನಾಡುತ್ತಾರೆ, ಹೋಗುತ್ತಾರೆ.
ಬಳ್ಳಾರಿಯಲ್ಲಿ ಶಾಂತಿ ನೆಲೆಸಬೇಕು. ಬಳ್ಳಾರಿ ಜನ ಈ ಹಿಂದೆ ಅನುಭವಿಸಿರುವುದೇ ಸಾಕು, ಮುಂದೆ ಯಾವುದೇ ತೊಂದರೆ ಆಗಬಾರದು. ನಮಗೆ ಅಷ್ಟೇ ಸಾಕು. ಈ ಹಿಂದೆ ಆಗಬಾರದ್ದೆಲ್ಲಾ ಆಗಿದೆ. ಮೊನ್ನೆ ನಡೆದ ದುರ್ಘಟನೆ ಆಗಬಾರದಿತ್ತು, ಆದರೆ ಆಗಿಹೋಗಿದೆ. ಇದರಿಂದ ನನಗೆ ದುಃಖವಾಗಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಬಹಳ ಅಭಿಮಾನ ಇದೆಯಲ್ಲಾ, ಇದು ಬಹಳ ಒಳ್ಳೆಯದು. ಒಳ್ಳೆಯದ್ದಕ್ಕೆ ಹೇಳಿದ್ದಾರೋ, ಕೆಟ್ಟದ್ದಕ್ಕೆ ಹೇಳಿದ್ದಾರೋ, ಒಟ್ಟಿನಲ್ಲಿ ನನ್ನನ್ನು ಗ್ರೇಟ್ ಡಿಸಿಎಂ ಎಂದು ಕರೆದಿರುವುದಕ್ಕೆ ಸಂತೋಷ ಎಂದರು.
ಜನಾರ್ದನ ರೆಡ್ಡಿ ಅವರ ಮನೆಯಲ್ಲಿ ದೊಣ್ಣೆ ಹಾಗೂ ಬುಲೆಟ್ ಗಳು ಸಿಕ್ಕಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಬಳ್ಳಾರಿ ಗಲಭೆಯಲ್ಲಿ ಸತ್ತ ಪಕ್ಷದ ಕಾರ್ಯಕರ್ತನ ಮನೆಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ನಾಯಕರು ಎಲ್ಲೆಲ್ಲಿ ಹೋಗಬೇಕು ಎಂದು ಹೇಳುತ್ತಾರೋ ಅಲ್ಲಿಗೆ ಹೋಗುವೆ ಎಂದರು.
ಕ್ರಿಮಿನಲ್ ಶಾಸಕರಿಗೆ ಡಿ ಕೆ ಶಿವಕುಮಾರ್ ಬೆಂಬಲ ನೀಡುತ್ತಿದ್ದಾರೆ ಎಂಬ ಜನಾರ್ದನ ರೆಡ್ಡಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ನನ್ನ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸಿ ನನಗೂ ಕ್ರಿಮಿನಲ್ ಪಟ್ಟ ಕೊಟ್ಟಿದ್ದಾರೆ. ಜನಾರ್ದನ ರೆಡ್ಡಿ ಅವರು ತಮ್ಮ ಇತಿಹಾಸದ ಪುಸ್ತಕವನ್ನು ತೆರೆದು ಯಾರ ಮೇಲೆ ಕ್ರಿಮಿನಲ್ ಕೇಸ್ ಇದೆ ಎಂಬುದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಮಾಜಿ ಸಿಎಂ, ಶಾಸಕರು, ಸಂಸದರ ಮೇಲೆ ಕ್ರಿಮಿನಲ್ ಕೇಸ್ ಗಳಿವೆಯಲ್ಲಾ? ಎಫ್ಐಆರ್ ದಾಖಲಿಸಿದ ನಂತರ ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೂ ಆ ಕ್ರಿಮಿನಲ್ ಅನ್ನು ಆರೋಪಿ ಅಂತಲೇ ಪರಿಗಣಿಸುತ್ತಾರೆ ಅಲ್ಲವೇ? ಎಂದು ಹೇಳಿದರು.
Advertisement