

ಬೆಂಗಳೂರು: ಮನ್ರೇಗಾ ಭ್ರಷ್ಟಾಚಾರ ತಡೆಗೆ ಹೊಸ ಹೆಸರಿಡಲಾಗಿದ್ದು, ವಿಬಿ-ಜಿ ರಾಮ್ ಜಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನ್ರೇಗಾದ ಹಲವಾರು ಅಂಶಗಳಲ್ಲಿ ಬದಲಾವಣೆಗಳನ್ನು ಮಾಡಿದ ನಂತರ NDA ಸರ್ಕಾರ ಈ ಕಾಯ್ದೆಯನ್ನು ಪರಿಚಯಿಸಿದೆ. ಇದು ಸಕಾರಾತ್ಮಕ ಚಿಂತನೆ ಇರುವ ಕಾಯ್ದೆ, ಮನ್ರೇಗಾ ಯೋಜನೆಯಲ್ಲಿ ಅನೇಕ ಅಂಶಗಳನ್ನು ಸುಧಾರಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ತರಲಾಗಿದೆ. ಮನ್ರೇಗಾ ಯೋಜನೆಯಲ್ಲಿ ದುರ್ಬಳಕೆ, ಭ್ರಷ್ಟಾಚಾರ ಇತ್ತು. ಮೂಲಸೌಕರ್ಯ ವೃದ್ಧಿಗೆ ಅದು ಸಹಕಾರಿ ಆಗಿರಲಿಲ್ಲ. ಅದಕ್ಕಾಗಿ ವಿಬಿ ಜಿ ರಾಮ್ ಜಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಸಮರ್ಥಿಸಿಕೊಂಡರು.
ಆದರೆ, ಇದರ ವಿರುದ್ಧ ಕಾಂಗ್ರೆಸ್ ಈಗಾಗಲೇ ಅಪಪ್ರಚಾರ ಶುರು ಮಾಡಿದೆ. ಕೇಂದ್ರದ ಯೋಜನೆಗಳಲ್ಲಿ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿರಂತರವಾಗಿ ಮಾಡಿಕೊಂಡು ಬಂದಿದೆ. ಕಾಂಗ್ರೆಸ್‌ಗೆ ಕಾಂಗ್ರೆಸ್‌ಗೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇರುವುದನ್ನು ಸಹಿಸಲು ಆಗುತ್ತಿಲ್ಲ. ಈಗ ವಿ ಬಿಜೆ ರಾಮ್ ಜಿ ವಿರುದ್ಧ ಅಪಪ್ರಚಾರ ಶುರು ಮಾಡಿದ್ದಾರೆಂದು ತಿಳಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆ ಪರ ಜ.15ರಿಂದ ಫೆ.28ರವರೆಗೆ ಕರ್ನಾಟಕದಾದ್ಯಂತ ಜಾಗೃತಿ ಅಭಿಯಾನ ಮಾಡುತ್ತೇವೆಂದು ಹೇಳಿದರು.
ಗಾಂಧೀಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಬೇಕಾದರೆ ಹಳ್ಳಿಗಳು ಉದ್ಧಾರ ಆಗಬೇಕು. ಅಂಬೇಡ್ಕರ್ ಆಗಲಿ ಗಾಂಧಿಯವರಾಗಲೀ ಅವರ ಹೆಸರಿಗೆ ಬಿಜೆಪಿ ಅಪಮಾನ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಅಪಮಾನ ಮಾಡೋ ಜಾಯ ಮಾನ ಇರೋದು ಕಾಂಗ್ರೆಸ್ಸಿಗೆ ಮಾತ್ರ ಎಂದರು.
Advertisement