

ಬೆಂಗಳೂರು: ಮಾಜಿ ಸಚಿವ ನಾರಾಯಣ ಗೌಡ ಅವರು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ,
ರಾಜ್ಯಾಧ್ಯಕ್ಷರು ನಮ್ಮನ್ನು ಸಭೆಗೆ ಕರೆಸಿದ್ದರು. ಸ್ಥಳೀಯ ಚುನಾವಣೆ ಸಂಬಂಧ ದೇವೇಗೌಡರು ಹೇಳಿಕೆ ನೀಡಿದರು. ನಾವು ನಮ್ಮ ಹಕ್ಕನ್ನು ಬಿಟ್ಟುಕೊಟ್ಟೆವು, ನಮ್ಮ ಎಂಪಿ ಸ್ಥಾನವನ್ನೂ ತ್ಯಾಗ ಮಾಡಿದೆವು. ಅವರು ಗೆದ್ದರು, ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾದರು. ಆದರೆ ಈಗ ಅವರಿಗೆ ನಾವು ಬೇಡವಾಗಿದ್ದೇವೆ ಎಂದು ಆರೋಪಿಸಿದರು.
ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಟಿಕೆಟ್ ಕೊಟ್ಟಾಗ, ಸುಮಲತಾ ಮೇಡಂ ಮನೆಗೆ ಹೋಗಿ ನಾವು ಮನವಿ ಮಾಡಿಕೊಂಡಿದ್ದೆವು. ಆಗ ನಾವು ಬೇಕಾಗಿದ್ದೆವು, ಈಗ ನಮ್ಮ ಶಕ್ತಿ ಅವರಿಗೆ ಅಗತ್ಯವಿಲ್ಲ. ಆದರೆ ನಮಗೆ ಪಕ್ಷ ಕಟ್ಟುವ ಶಕ್ತಿ ಇದೆ. ಹಿರಿಯರು ಹೇಳಿದಂತೆ ನಾವು ಇದುವರೆಗೆ ನಡೆದುಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ಕಟ್ಟುತ್ತೇವೆ, ಅದನ್ನು ಭದ್ರಕೋಟೆಯಾಗಿ ರೂಪಿಸುತ್ತೇವೆ ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆಗಳತ್ತ ಬಿಜೆಪಿ ಗಮನ: ಸಚ್ಚಿದಾನಂದ
ಬಿಜೆಪಿ ನಾಯಕ ಸಚ್ಚಿದಾನಂದ, ಮಂಡ್ಯ ಜಿಲ್ಲೆಯ ಎಲ್ಲಾ ಪ್ರಮುಖ ನಾಯಕರು ಸೇರಿ ಕ್ಷೇತ್ರದ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೇವೆ. ಕಾರ್ಯಕರ್ತರ ಚುನಾವಣೆ ಇರುವುದರಿಂದ ನಾವು ಕಾರ್ಯಕರ್ತರ ಜೊತೆಯಲ್ಲೇ ಇರುತ್ತೇವೆ. ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಗೆಲ್ಲುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಾವು ಎದುರಿಸುತ್ತೇವೆ. ಸುಮಲತಾ ಅಂಬರೀಷ್ ಮತ್ತು ನಾರಾಯಣ ಗೌಡ ಅವರ ದಿನಾಂಕ ಪಡೆದು ಜಿಲ್ಲಾ ಪ್ರವಾಸ ಕೈಗೊಳ್ಳಲಾಗುತ್ತದೆ. ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರವನ್ನು ನಾವು ಮಾಡಿಕೊಂಡಿದ್ದೇವೆ. ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳೇ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶಕ್ತಿ ಪ್ರದರ್ಶಿಸದೇ ನಾಯಕತ್ವ ಸಾಧ್ಯವಿಲ್ಲ ಎಂದು ಅವರು ಹೇಳಿದರು.
Advertisement