

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರುತ್ತಿದ್ದು, ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಭಾರತೀಯ ಜನತಾ ಪಕ್ಷದ ಹಿರಿಯನಾಯಕರು ಜಿಲ್ಲಾ ಪಕ್ಷದ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ರಾಜ್ಯ ಕೋರ್ ಕಮಿಟಿ ಸದಸ್ಯರು ಸೇರಿದಂತೆ ವಿಜಯೇಂದ್ರ ಮತ್ತು ಹಿರಿಯ ನಾಯಕರು ಪ್ರತಿ ಜಿಲ್ಲೆಯ ನಾಯಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸುತ್ತಿದ್ದಾರೆಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ತಳಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಕ್ರಮಗಳು, ಈ ವರ್ಷ ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ಸಿದ್ಧತೆಗಳು ಮತ್ತು ಸ್ಥಳೀಯ ನಾಯಕರಲ್ಲಿ ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಪರಿಹರಿಸುವ ಬಗ್ಗೆ ನಾಯಕರು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಜನವರಿ 5 ರಿಂದ ಜನವರಿ 13 ರವರೆಗೆ ನಡೆಯುವ ಸಭೆಗಳಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಲ್ಲದೆ, ಶಾಸಕರು, ಸಂಸದರು, ಮಾಜಿ ಸಂಸದರು ಮತ್ತು ಶಾಸಕರು ಭಾಗವಹಿಸುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಶುಕ್ರವಾರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ ಮತ್ತು ಇತರ ಹಿರಿಯ ನಾಯಕರು ಪಕ್ಷದ ಕಚೇರಿಯಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿದ್ದರು.
Advertisement