

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆ ಹೇರುವ ಕೇರಳ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ಬಾಂಗ್ಲಾದೇಶಿಗಳ ಪರವಾಗಿ ಮಿಡಿಯುವ ಕೆಸಿ.ವೇಣುಗೋಪಾಲ್ ಅವರ ಹೃದಯ ಈಗ, ಕಾಸರಗೋಡಿನ ಕನ್ನಡಿಗರ ಪರವಾಗಿ ಮಿಡಿಯುದಿಲ್ಲವೇ? ಎಂದು ಪ್ರಶ್ನೆ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಅಕ್ರಮ ವಲಸಿಗರು ಕರ್ನಾಟಕದ ಭೂಮಿಯನ್ನು ಒತ್ತುವರಿ ಮಾಡಿಕೊಂಡರೂ, "ಮಾನವೀಯತೆ" ದೃಷ್ಟಿಯಿಂದ ಮನೆ ಕೊಡಬೇಕು ಎಂದು ರೋಹಿಂಗ್ಯಗಳು, ಬಾಂಗ್ಲಾದೇಶಿಗಳ ಪರವಾಗಿ ಮಿಡಿಯುವ ಕೆ.ಸಿ.ವೇಣುಗೋಪಾಲ್ ಅವರ ಹೃದಯ ಈಗ, ಕಾಸರಗೋಡಿನ ಕನ್ನಡಿಗರ ಪರವಾಗಿ ಮಿಡಿಯುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸತ್ತರೂ, ವಯನಾಡಿನಲ್ಲಿ ಪ್ರಕೃತಿ ವಿಕೋಪ ಉಂಟಾದರೂ, ಕೇರಳಿಗರ ಪರವಾಗಿ ಕರ್ನಾಟಕ ಸರ್ಕಾರದ ಮೇಲೆ ಸವಾರಿ ಮಾಡುವ ಸಂಸದೆ ಪ್ರಿಯಾಂಕಾ ಗಾಂಧಿ ಅವರು, ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಮಲಯಾಳಂ ಭಾಷಾ ಮಸೂದೆ -2025ರ ವಿರುದ್ಧ ಧ್ವನಿ ಎತ್ತುವ ಮೂಲಕ ಈಗ ಕನ್ನಡಿಗರ ಪರ ನಿಲ್ಲುತ್ತಾರಾ?
ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ವಿಷಯದಲ್ಲಿ ಕೇರಳದ ಪರ ತೋರಿದ ಕಾಳಜಿಯನ್ನು ಕಾಂಗ್ರೆಸ್ ನಾಯಕರು ಈಗ ಕನ್ನಡಿಗರ ಪರವಾಗಿ ತೋರುತ್ತಾರಾ? ಎಂದು ಸರಣಿ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ಸ್ವಾಭಿಮಾನ, ಆತ್ಮಗೌರವಕ್ಕೆ ಪದೇ ಪದೇ ಧಕ್ಕೆ ತರುತ್ತಿರುವ ಕಾಂಗ್ರೆಸ್ ಪಕ್ಷದ ಕೇರಳ ಪಟಾಲಂ, ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜಕೀಯ ಲಾಭಕ್ಕಾಗಿ, ಯಾರದ್ದೋ ಸ್ವಾರ್ಥಕ್ಕಾಗಿ ಕರ್ನಾಟಕದ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಪದೇ ಪದೇ ಬಲಿ ಕೊಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವ ದಿನ ಬಹಳ ದೂರವಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆ ಹೇರುವ ಕೇರಳ ಸರ್ಕಾರದ ನಿರ್ಧಾರ ಖಂಡನೀಯ. ರಾಜ್ಯದ ಆಡಳಿತ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ವೇಣುಗೋಪಾಲ್ ಅವರ ಕಿವಿಹಿಂಡಿ, ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಿ ಎಂದು ತಿಳಿಸಿದ್ದಾರೆ.
Advertisement