ಭಾರತದ ಅಭಿವೃದ್ಧಿ ಕುರಿತು ರಾಹುಲ್-ಡಿ.ಕೆ ಶಿವಕುಮಾರ್ ಭಿನ್ನ ಹೇಳಿಕೆ; "Slip of the tongue" ಅಲ್ಲ, ತಾಳ್ಮೆಯ ಕಟ್ಟೆಯೊಡೆದಿರುವುದಕ್ಕೆ ಸ್ಪಷ್ಟ ಸಂದೇಶ..!
ಬೆಂಗಳೂರು: ಭಾರತದ ಅಭಿವೃದ್ಧಿ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಭಿನ್ನ ರೀತಿಯಲ್ಲಿ ಹೇಳಿಕೆ ನೀಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ಭಾರತದ ಆರ್ಥಿಕತೆ ಸತ್ತುಹೋಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದರು. ಆದರೆ, ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿರುವ ಡಿಕೆ.ಶಿವಕುಮಾರ್ ಅವರು,"ಭಾರತ ಉದಯಿಸುತ್ತಿದೆ ಎಂದು ಹೇಳಿದ್ದಾರೆ. ಈ ಭಿನ್ನ ಹೇಳಿಕೆ ಕೈಪಾಳಯದಲ್ಲಿ ಒಡಕು ಮೂಡಿರುವುದಕ್ಕೆ ಸ್ಪಷ್ಟ ಸಂದೇಶವಾಗಿದೆ ಎಂದು ಬಿಜೆಪಿ ಹೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಕರ್ನಾಟಕ ಕಾಂಗ್ರೆಸ್‌ನಲ್ಲಿ ಗಾಳಿ ಬೇರೆ ದಿಕ್ಕಿನಲ್ಲಿ ಬೀಸುತ್ತಿದೆಯೇ? ಒಂದೆಡೆ ದಾವೋಸ್ ನಲ್ಲಿ "ಭಾರತ ಉದಯಿಸುತ್ತಿದೆ" ಎಂದು ಡಿಕೆ.ಶಿವಕುಮಾರ್ ಹೇಳುತ್ತಿದ್ದಾರೆ, ರಾಹುಲ್ ಗಾಂಧಿ ಭಾರತದ ಆರ್ಥಿಕತೆ ಸತ್ತು ಹೋಗಿದೆ ಎಂಬ ಹೇಳಿಕೆಯನ್ನು ಮುಂದುವರಿಸುತ್ತಿದ್ದಾರೆ. ಹಾಗಾದರೆ ಇಲ್ಲಿ ಏನಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಇದು ಬಾಯಿ ತಪ್ಪಿ ನೀಡಿರುವ ಹೇಳಿಕೆಯಲ್ಲ. ಇದು ಕಾಂಗ್ರೆಸ್‌ನ ಒಂದು ಬಣ ವಿಭಿನ್ನ ದಿಕ್ಕಿನಲ್ಲಿ ಸಾಕುತ್ತಿರುವುದನ್ನು ತೋರಿಸುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಅತೃಪ್ತರಾಗಲೂ ಕಾರಣಗಳಿವೆ ಎಂಬುದು ನಮಗೆ ತಿಳಿದಿದೆ. ಅಧಿಕಾರ ಹಂಚಿಕೆ ಭರವಸೆಗಳನ್ನು ಮುಂದೂಡಲಾಗಿದೆ, ಇದೀಗ ಅವರು ನೀಡಿರುವ ಹೇಳಿಕೆ ಅವರ ತಾಳ್ಮೆಯ ಕಟ್ಟೆಯೊಡೆದಿದೆ ಎಂಬುದಕ್ಕೆ ಸ್ಪಷ್ಟ ಸಂದೇಶ ನೀಡಿದಂತಾಗಿದೆ.
ಸ್ವರ ಬದಲಾವಣೆಯಿಂದ ಇದು ಸಾಬೀತಾಗುತ್ತಿದೆ. ರಾಹುಲ್ ಗಾಂಧಿ ಕೇಳಲು ಇಷ್ಟಪಡದ ಮಾತುಗಳನ್ನೇ ಡಿಕೆ.ಶಿವಕುಮಾರ್ ಹೇಳಿರುವಂತಿದೆ. ದೆಹಲಿ ಘೋಷಣೆಗಳನ್ನು ಬಳಸಿಕೊಂಡು ಕರ್ನಾಟಕದಲ್ಲಿ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಡಿಕೆ.ಶಿವಕುಮಾರ್ ಅವರು ರಾಹುಲ್ ನೆನಪಿಸುತ್ತಿದ್ದಾರೆಯೇ? ಅಥವಾ ರಾಹುಲ್ ಗಾಂಧಿಯವರ ನಿರಾಶಾವಾದಕ್ಕಿಂತ ವಾಸ್ತವ ನಿರೂಪಣೆ ಹೆಚ್ಚು ಮುಖ್ಯ ಎಂಬುದರ ಸೂಕ್ಷ್ಮ ಸಂಕೇತವೇ? ಇಂದು ಸ್ವರ ಬದಲಾವಣೆಯಾಗಿದೆ. ನಾಳೆ ಬಿರುಗಾಳಿಯೂ ಏಳಬಹುದು ಎಂದು ಎಚ್ಚರಿಸಿದ್ದಾರೆ.

