

ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ರಾಜ್ಯ ಸರ್ಕಾರ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದನ್ನು ವಿರೋಧಿಸಿ ಗುರುವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಸಭಾತ್ಯಾಗ ಮಾಡಿತು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆರಿಗೆದಾರರ ಹಣವನ್ನು "ಸುಳ್ಳು ಪ್ರಚಾರ"ಕ್ಕಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಇಂದು ವಿಧಾನಸಭೆಯಲ್ಲಿ ಜಾಹೀರಾತು ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್, "ಎಲ್ಲಾ ಪತ್ರಿಕೆಗಳಲ್ಲಿ ಮುಖಪುಟ ಜಾಹೀರಾತು ಇದೆ. ಸರ್ಕಾರವು ತೆರಿಗೆದಾರರ ಹಣವನ್ನು ದುರ್ಬಳಕೆ ಮಾಡಿಕೊಳ್ಳುತಿದೆ" ಎಂದು ಹೇಳಿದರು.
"ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧ ಜಾಹೀರಾತು ನೀಡಿದ್ದರೆ, ಅದು ಒಪ್ಪಿಕೊಳ್ಳಬಹುದು. ಆದರೆ ವಿಬಿ-ಜಿ RAM ಜಿ ಕಾಯ್ದೆಯ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀಡಿದ ಇಂತಹ ಜಾಹೀರಾತು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಜನರ ತೆರಿಗೆ ಹಣವನ್ನು ಬಳಸಿ ಜಾಹೀರಾತು ನೀಡಿರುವುದು ತಪ್ಪು. ಮಹಾತಗಾಂಧೀಜಿಯವರಿಗೂ ಅಪಮಾನ ಮಾಡಿದ್ದಾರೆ ಎಂದರು.
ಇನ್ನೂ ಜಾಹೀರಾತು ಸಮರ್ಥಿಸಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ ಅವರು, "ಗುಜರಾತ್ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಜಾಹೀರಾತು ಕೊಟ್ಟಿದೆ. ಇದು ಜನರ ತೆರಿಗೆ ಹಣದಿಂದ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ವ್ಯಾಕ್ಸಿನ್ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಮೋದಿ ಜಿ ಎಂದು ಹಿಂದಿನ ಬಿಜೆಪಿ ಸರ್ಕಾರ ಜಾಹೀರಾತು ಕೊಟ್ಟಿತ್ತು. ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆ ಪರ ಬಿಜೆಪಿ ಸಂಸದರು ಮಾತನಾಡುತ್ತಾರೆ. ಇದು ಯಾವ ರೀತಿಯಲ್ಲಿ ಗಾಂಧೀಜಿಗೆ ನೀಡುವ ಗೌರವ" ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಹೇಳುವ ಎಲ್ಲವನ್ನೂ ರಾಜ್ಯ ಸರ್ಕಾರ "ಕೈಜೋಡಿಸಿ" ಒಪ್ಪಿಕೊಳ್ಳಬೇಕು ಎಂದು ಬಿಜೆಪಿ ಸೂಚಿಸುತ್ತಿರುವಂತೆ ಕಾಣುತ್ತಿದೆ. ಆದರೆ ಈ ಜಾಹೀರಾತು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು.
"ಯಾವ ಕಾನೂನನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಬಿಜೆಪಿ ಎತ್ತಿ ತೋರಿಸಲಿ" ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಜಾಹೀರಾತು ವಿಚಾರದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ತೀವ್ರ ವಾಗ್ವಾದ, ಆರೋಪ-ಪ್ರತ್ಯಾರೋಪಗಳು ನಡೆದವು. ಬಳಿಕ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು.
Advertisement