

ಬೆಂಗಳೂರು: ಮನ್ರೇಗಾ ಯೋಜನೆ ಬಗ್ಗೆ ಚರ್ಚೆ ಮಾಡಲು ಹಾಗೂ ನಿರ್ಣಯ ಅಂಗೀಕರಿಸುವ ಸಲುವಾಗಿ ವಿಧಾನಮಂಡಲ ಅಧಿವೇಶನವನ್ನ 2 ದಿನ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸರಕಾರ ಮನರೇಗಾ ಕಾಯ್ದೆ ಬದಲಾಗಿ ಜಾರಿಗೆ ತಂದಿರುವ ವಿಬಿ: ಜಿ ರಾಮ್ ಜಿ ಕಾಯ್ದೆಯ ಕುರಿತು ವಿವರಣೆ ನೀಡಿದ ಸಿದ್ದರಾಮಯ್ಯ, ಈ ಕಾಯ್ದೆ ಕುರಿತು ಸಮಗ್ರ ಚರ್ಚೆ ನಡೆಸಲು ಅಧಿವೇಶನವನ್ನು ಎರಡು ದಿನ ವಿಸ್ತರಣೆ ಮಾಡಲು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಶಾಸಕರು ಈ ಕಾಯ್ದೆ ಕುರಿತಾದ ಚರ್ಚೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ನರೇಗಾ ವಿಷಯಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ಆದರೆ, ಚರ್ಚೆಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಸೋಮವಾರ ಮಂಗಳವಾರ ನರೇಗಾ ಚರ್ಚೆಗಾಗಿಯೇ ಅಧಿವೇಶನ ವಿಸ್ತರಿಸೋಣ. ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ, ವಿಧಾನಪರಿಷತ್ ಸದಸ್ಯರು, ವಿಧಾನಸಭೆ ಸದಸ್ಯರು ಉಭಯ ಸದನಗಳಲ್ಲಿ ಕಡ್ಡಾಯವಾಗಿ ನರೇಗಾ ಚರ್ಚೆಯಲ್ಲಿ ಭಾಗವಹಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ಅಭಿವೃದ್ಧಿ ಕಾರ್ಯಗಳಿಗಾಗಿ ಶಾಸಕರಿಗೆ ಸಮಾನವಾಗಿ ಅನುದಾನವನ್ನು ನೀಡುವಂತೆ ಎಂಎಲ್‌ಸಿಗಳು ಸಿಎಂಗೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ, ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ. ಮತ್ತು ವಿರೋಧ ಪಕ್ಷದ ಶಾಸಕರಿಗೆ 25 ಕೋಟಿ ರೂ.ಗಳನ್ನು ಸಿಎಂ ಮಂಜೂರು ಮಾಡಿದ್ದಾರೆ. ಎಂಎಲ್‌ಸಿಗಳು ಕನಿಷ್ಠ 25 ಕೋಟಿ ರೂ.ಗಳಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವು ಶಾಸಕರು ಸ್ಥಳೀಯ ಸಂಸ್ಥೆ ಚುನಾವಣೆಗೆ ಮೀಸಲಾತಿ ವಿಷಯವನ್ನು ಎತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ತಿದ್ದುಪಡಿಗಳನ್ನು ಕೋರಿದ್ದಾರೆ.ಆದರೆ ಮೀಸಲಾತಿ ನಿಗದಿಪಡಿಸಲಾಗಿರುವುದರಿಂದ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು ಎಂದು ತಿಳಿದುಬಂದಿದೆ. ಇದೇ ವೇಳೆ ಮಾರ್ಚ್‌ನಲ್ಲಿ ಬಜೆಟ್ ಮಂಡಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆಂದು ತಿಳಿದುಬಂದಿದೆ.
Advertisement