

ಬೆಂಗಳೂರು: ಬಿ ವೈ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ಕೂಗು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆರಂಭದಿಂದಲೂ ಸಹ ವಿರೋಧಿ ಬಣ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದೆ.
ಈ ನಡುವೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ, ನಾನು ಪಕ್ಷದ ಶಿಸ್ತಿನ ಸಿಪಾಯಿ, ಹೈಕಮಾಂಡ್ ಸಂದೇಶಕ್ಕೆ ಬದ್ಧ. ಅಮಿತ್ ಶಾ ವರುಣದಲ್ಲಿ ಸ್ಪರ್ಧಿಸು ಎಂದಿದ್ದಕ್ಕೆ ಅಲ್ಲಿ ಸ್ಪರ್ಧಿಸಿದ್ದೆ. ತುಮಕೂರಿನಲ್ಲಿ ಸ್ಪರ್ಧೆ ಮಾಡು ಎಂದರು, ಅಲ್ಲಿ ಸ್ಪರ್ಧಿಸಿ ಗೆದ್ದೆ ಎಂದರು.
ಹೈಕಮಾಂಡ್ ಏನು ಹೇಳುತ್ತದೋ ಅದನ್ನು ನಾನು ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ದ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಹುದ್ದೆಗಳ ಬದಲಾವಣೆ ನಂತರ ಬಿಜೆಪಿಯಲ್ಲಿಯೂ ಸಹ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ಕೇಂದ್ರ ಸಚಿವ ಸೋಮಣ್ಣ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಈ ಸಂಬಂಧ ರಾಜ್ಯ ಸಚಿವ ಸೋಮಣ್ಣ ಅವರು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯ ಸಚಿವ ಸೋಮಣ್ಣ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ವಿಜಯೇಂದ್ರ ಅವರನ್ನು ಬದಲಿಸಲು ಅವರೇ ಸರಿಯಾದ ಅಭ್ಯರ್ಥಿ ಎಂದು ಬಿಜೆಪಿ ಭಾವಿಸಿದೆ ಎಂದು ಮೂಲಗಳು ತಿಳಿಸಿವೆ.