'ಬಾಂಗ್ಲಾದೇಶಿಗರು ಬೆಂಗಳೂರಿಗೆ ಬಂದಿದ್ದು ಹೇಗೆ? ಗಡಿ ರಕ್ಷಿಸಲು ಆಗಲ್ಲ, ರಾಜ್ಯದ ಮೇಲೆ ಆರೋಪ ಮಾಡ್ತೀರಾ?'; ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ನಾವು ಬಾಂಗ್ಲಾದೇಶಿಗರಿಗೆ ಪ್ರಮಾಣಪತ್ರ ನೀಡುತ್ತಿದ್ದೇವೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ, ನನ್ನ ಪ್ರಶ್ನೆ ಏನೆಂದರೆ, ಬಾಂಗ್ಲಾದೇಶದವರು ಬೆಂಗಳೂರಿಗೆ ಹೇಗೆ ಬರುತ್ತಿದ್ದಾರೆ?
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಬಾಂಗ್ಲಾದೇಶದ ಅಕ್ರಮ ವಲಸಿಗರು ಬೆಂಗಳೂರಿಗೆ ಬಂದಿದ್ದು ಹೇಗೆ? ದೇಶದ ಅಂತರರಾಷ್ಟ್ರೀಯ ಗಡಿಯನ್ನು ರಕ್ಷಿಸಲು ಸಾಧ್ಯವಾಗದವರು ಈಗ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಾಂಗ್ಲಾದೇಶಿಗರಿಗೆ ಪ್ರಮಾಣಪತ್ರ ನೀಡುತ್ತಿದ್ದೇವೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ, ನನ್ನ ಪ್ರಶ್ನೆ ಏನೆಂದರೆ, ಬಾಂಗ್ಲಾದೇಶದವರು ಬೆಂಗಳೂರಿಗೆ ಹೇಗೆ ಬರುತ್ತಿದ್ದಾರೆ? ಅಂತರರಾಷ್ಟ್ರೀಯ ಗಡಿಯನ್ನು ಕಾಯುವುದು ಯಾರ ಜವಾಬ್ದಾರಿ? ಕರ್ನಾಟಕ ಸರ್ಕಾರದ್ದೋ ಅಥವಾ ಕೇಂದ್ರ ಸರ್ಕಾರದ್ದೋ?" ಎಂದು ಪ್ರಶ್ನಿಸಿದರು.

ಇದೇ ವೇಳೆ ಅಕ್ರಮ ವಲಸಿಗರಿಗೆ ಕರ್ನಾಟಕ ಸರ್ಕಾರ ಯಾವುದೇ ಸಂದರ್ಭದಲ್ಲೂ ಶಾಶ್ವತ ನಿವಾಸ ಪ್ರಮಾಣಪತ್ರ (PRC) ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಗಡಿ ಭದ್ರತೆ ಸಂಪೂರ್ಣವಾಗಿ ಕೇಂದ್ರದ ಜವಾಬ್ದಾರಿಯಾಗಿದ್ದು, ಅದರಲ್ಲಿ ವೈಫಲ್ಯ ಕಂಡುಬಂದರೆ ಅದರ ಹೊಣೆಯನ್ನು ರಾಜ್ಯದ ಮೇಲೆ ಹೊರಿಸುವುದು ಸರಿಯಲ್ಲ ಎಂದು ಹೇಳಿದರು.

ನಾವು ಜವಾಬ್ದಾರಿಯುತ ಸರ್ಕಾರ. ಅಕ್ರಮವಾಗಿ ದೇಶಕ್ಕೆ ಬಂದಿರುವ ಯಾವುದೇ ವಿದೇಶಿ ಪ್ರಜೆಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದಿಲ್ಲ. ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನಾವು ಕೈಗೊಂಡಿರುವ ಕ್ರಮಗಳಲ್ಲಿ ಯಾವುದೇ ಲೋಪ ಕಂಡುಹಿಡಿಯಲು ಸಾಧ್ಯವಾಗದ ಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. "ಪ್ರತಿದಿನ ಬಾಂಗ್ಲಾದೇಶದವರು ದೇಶಕ್ಕೆ ಬರುತ್ತಿದ್ದಾರೆ ಎಂದು ಹೇಳುತ್ತಿರುವುದು ಬಿಜೆಪಿಯೇ. ಉತ್ತರ ಪ್ರದೇಶದಲ್ಲಿ, ಕರ್ನಾಟಕದಲ್ಲಿ, ಪಶ್ಚಿಮ ಬಂಗಾಳದಲ್ಲಿ ಇದೇ ಮಾತನ್ನು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹಾಗಾದರೆ ಅಂತರರಾಷ್ಟ್ರೀಯ ಗಡಿಯನ್ನು ರಕ್ಷಿಸುವ ಹೊಣೆ ಯಾರದು? ಕರ್ನಾಟಕಕ್ಕೆ ಯಾವುದೇ ದೇಶದೊಂದಿಗೆ ಅಂತರರಾಷ್ಟ್ರೀಯ ಗಡಿ ಇದೆಯೇ? ಅಕ್ರಮ ವಲಸಿಗರು ದೇಶದೊಳಗೆ ಹೇಗೆ ಪ್ರವೇಶಿಸುತ್ತಿದ್ದಾರೆ ಎಂಬುದಕ್ಕೆ ಮೊದಲು ಕೇಂದ್ರ ಸರ್ಕಾರ ಉತ್ತರಿಸಬೇಕು," ಎಂದು ಹೇಳಿದರು.

ರಾಜ್ಯ ಸರ್ಕಾರವು ನೈಜ ಮತದಾರರಿಗೆ ಮಾತ್ರ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುತ್ತಿದೆ. "ಇದು ಕೇವಲ ನಿವಾಸ ದೃಢೀಕರಣ ಪ್ರಮಾಣಪತ್ರ. ಪಶ್ಚಿಮ ಬಂಗಾಳದಲ್ಲಿ ಸುಮಾರು ಒಂದು ಕೋಟಿ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಅಥವಾ PRC ಇದ್ದರೂ ಅದರಿಂದ ಭಾರತೀಯ ಪೌರತ್ವ ಸಾಬೀತಾಗುವುದಿಲ್ಲ. ಹಾಗಿದ್ದರೆ ಪೌರತ್ವ ಸಾಬೀತುಪಡಿಸಲು ಯಾವ ದಾಖಲೆ ಬೇಕು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

Priyank Kharge
Watch | ಪ್ರಿಯಾಂಕ್ ಖರ್ಗೆ 'ಬಲಿತ' ದಲಿತ! ಶೋಭಾ ಕರಂದ್ಲಾಜೆ ವಾಗ್ದಾಳಿ

"PRC ಅನ್ನು ಸರ್ಕಾರದ ಅಧಿಕಾರಿಗಳೇ ನೀಡುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಅಥವಾ ಪಕ್ಷದ ನಾಯಕರು ಪ್ರಮಾಣಪತ್ರ ನೀಡುತ್ತಿದ್ದರೆ ವಿರೋಧ ವ್ಯಕ್ತಪಡಿಸಬಹುದು. ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದೆ. ಅರ್ಹರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವುದು ನಮ್ಮ ಜವಾಬ್ದಾರಿ. ಆದರೆ, ಬಿಜೆಪಿ ಯಾವುದೇ ಆಧಾರವಿಲ್ಲದೆ ಅಕ್ರಮ ವಲಸಿಗರು ಹಾಗೂ ಬಾಂಗ್ಲಾದೇಶಿಗರಿಗೆ PRC ನೀಡಲಾಗುತ್ತಿದೆ ಎಂದು ಹೇಳುತ್ತಿದೆ. ಬಿಜೆಪಿಗೆ ಸಾಮಾನ್ಯ ಜ್ಞಾನವೂ ಇಲ್ಲವೇ?" ಎಂದು ಕಿಡಿಕಾರಿದರು.

ಇದೇ ವಿಷಯವಾಗಿ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಜನರಿಗೆ ಅನುಕೂಲವಾಗುವ ಉದ್ದೇಶದಿಂದಲೇ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

"ಭಾರತ ಚುನಾವಣಾ ಆಯೋಗ (ECI) SIR ಪ್ರಕ್ರಿಯೆಯಲ್ಲಿ 13 ದಾಖಲೆಗಳನ್ನು ಕೇಳಿದೆ. ಅದರಲ್ಲಿ ಸ್ವಂತ ಮನೆ ಹೊಂದಿರುವ ಕುರಿತು ಮಾಹಿತಿಯೂ ಕೇಳಲಾಗಿದೆ. ಹೀಗಾಗಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲಾಗುತ್ತಿದೆ," ಎಂದು ಹೇಳಿದರು.

"ಕೇಂದ್ರ ಸರ್ಕಾರ ಜಾತಿ ಪ್ರಮಾಣಪತ್ರ ಸೇರಿದಂತೆ ಯಾವುದೇ ಪ್ರಮಾಣಪತ್ರಗಳನ್ನು ನೀಡುವುದಿಲ್ಲ. ಇಂತಹ ದಾಖಲೆಗಳನ್ನು ರಾಜ್ಯ ಸರ್ಕಾರವೇ ನೀಡುತ್ತದೆ. ಆಧಾರ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರವೇ PRC ನೀಡಲಾಗುತ್ತದೆ. ಇದರಲ್ಲಿ ತಪ್ಪೇನಿದೆ? ಬಿಜೆಪಿ ಅನಗತ್ಯವಾಗಿ ಈ ವಿಚಾರವನ್ನು ರಾಜಕೀಯಗೊಳಿಸುತ್ತಿದೆ," ಎಂದು ತಿಳಿಸಿದರು.

"ಯಾವುದೇ ವಿದೇಶಿ ಪ್ರಜೆಗೆ ಭಾರತೀಯ ಪೌರತ್ವ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆದ್ದರಿಂದ ಅಕ್ರಮ ವಲಸಿಗರಿಗೆ ಪೌರತ್ವ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ," ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿದ್ದರೂ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.

"ಭಾರತ ಚುನಾವಣಾ ಆಯೋಗ ವಿಶೇಷ ಅನುಮತಿ ನೀಡಿದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ನಡೆಸಲು ನಾವು ಸಿದ್ಧರಿದ್ದೇವೆ. ಆದರೆ, ಅಂತಿಮ ನಿರ್ಧಾರ ಚುನಾವಣಾ ಆಯೋಗದ ಕೈಯಲ್ಲಿದೆ," ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com