ಡಿ.ಕೆ. ಶಿವಕುಮಾರ್ ಮತ್ತು ಯೆಜ್ಡಿ ರೋಡ್‌ಕಿಂಗ್: CM ಕಾಲೇಜು ದಿನಗಳ ಈ ಬೈಕ್ ರಾಜಕೀಯ ಪಯಣಕ್ಕೆ ಸಾಕ್ಷಿ-Video

ಈ ಅಪರೂಪದ ಬಾಂಧವ್ಯದ ಕಥೆಯನ್ನು ಹಿರಿಯ ಪತ್ರಕರ್ತ ರಶೀದ್ ಕಿದ್ವಾಯಿ ಅವರ ಹೊಸ ಪುಸ್ತಕ 'ಡಿ.ಕೆ. ಶಿವಕುಮಾರ್ – ಕಾಂಗ್ರೆಸ್ ಕ್ರೈಸಿಸ್ ಮ್ಯಾನೇಜರ್, ಕರ್ನಾಟಕದ ಕಿಂಗ್‌ಮೇಕರ್'ನಲ್ಲಿ ವಿವರಿಸಲಾಗಿದೆ.
Karnataka Chief Minister D K Shivakumar rides his Yezdi Roadking motorcycle.
ಯೆಜ್ಡಿ ರೋಡ್‌ಕಿಂಗ್ ಬೈಕ್ ನಲ್ಲಿ ಸಿಎಂ ಡಿ ಕೆ ಶಿವಕುಮಾರ್
Updated on

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜಕೀಯದಲ್ಲಿ ಹೋರಾಟಗಾರ, ದೃಢ ನಾಯಕ ಎಂಬ ಹೆಸರನ್ನು ಪಡೆದಿದ್ದರೂ, ತಮ್ಮ ಹಳೆಯ ಯೆಜ್ಡಿ ರೋಡ್‌ಕಿಂಗ್ ಬೈಕ್ ಏರಿದಾಗ ಅವರೊಳಗಿನ ಬಾಲಮನಸ್ಸು ಮತ್ತೆ ಜೀವಂತವಾಗುತ್ತದೆ.

ಈ ಅಪರೂಪದ ಬಾಂಧವ್ಯದ ಕಥೆಯನ್ನು ಹಿರಿಯ ಪತ್ರಕರ್ತ ರಶೀದ್ ಕಿದ್ವಾಯಿ ಅವರ ಹೊಸ ಪುಸ್ತಕ 'ಡಿ.ಕೆ. ಶಿವಕುಮಾರ್ – ಕಾಂಗ್ರೆಸ್ ಕ್ರೈಸಿಸ್ ಮ್ಯಾನೇಜರ್, ಕರ್ನಾಟಕದ ಕಿಂಗ್‌ಮೇಕರ್'ನಲ್ಲಿ ವಿವರಿಸಲಾಗಿದೆ.

1980ರ ಸುಮಾರಿಗೆ, ಕಾಲೇಜು ವಿದ್ಯಾರ್ಥಿಯಾಗಿದ್ದ ಡಿ ಕೆ ಶಿವಕುಮಾರ್ ಉತ್ಸಾಹಿ, ಕ್ರಿಯಾಶೀಲ ಹಾಗೂ ನಾಯಕತ್ವ ಗುಣಗಳಿಂದ ಗುರುತಿಸಿಕೊಂಡಿದ್ದರು. ತಮ್ಮ ಸ್ನೇಹಿತರು ಮತ್ತು ಸಹಪಾಠಿಗಳ ನಡುವೆ ಜನರನ್ನು ಸಂಘಟಿಸುವ ಸಾಮರ್ಥ್ಯದಿಂದಲೇ ಅವರು ಪ್ರಸಿದ್ಧರಾಗಿದ್ದರು ಎಂದು ಹ್ಯಾಶೆಟ್ ಇಂಡಿಯಾ ಪ್ರಕಟಿಸಿರುವ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಕಾಲೇಜಿನೊಳಗೂ ಹೊರಗೂ ಜನರನ್ನು ಸುಲಭವಾಗಿ ಒಗ್ಗೂಡಿಸಿ, ಸಹಜ ನಾಯಕತ್ವದಿಂದ ಮುನ್ನಡೆಸುತ್ತಿದ್ದ ಡಿ ಕೆ ಶಿವಕುಮಾರ್ ಅವರಲ್ಲಿ ಮುಂದಿನ ರಾಜಕೀಯ ಜೀವನದ ಸುಳಿವುಗಳು ಆಗಲೇ ಕಾಣಿಸಿಕೊಂಡಿದ್ದವು ಎಂದು ಪುಸ್ತಕ ವಿವರಿಸುತ್ತದೆ. ಕಾಲೇಜು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡದ್ದು ಅವರ ರಾಜಕೀಯ ಕೌಶಲ್ಯವನ್ನು ಇನ್ನಷ್ಟು ತೀಕ್ಷ್ಣಗೊಳಿಸಿತು.

Karnataka Chief Minister D K Shivakumar rides his Yezdi Roadking motorcycle.
ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್: ಸಿದ್ದು-ಡಿಕೆಶಿ, ಹರಿಪ್ರಸಾದ್'ಗೆ 'ಕೈ' ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!

ಅದೇ ಅವಧಿಯಲ್ಲಿ CEA 7684 ನೋಂದಣಿ ಸಂಖ್ಯೆಯ ಯೆಜ್ಡಿ ರೋಡ್‌ಕಿಂಗ್ ಬೈಕ್ ಅವರ ಅವಿಭಾಜ್ಯ ಸಂಗಾತಿಯಾಗಿತ್ತು.

"ವಿದ್ಯಾರ್ಥಿ ವಸತಿಗೃಹಗಳು, ಚುನಾವಣಾ ಪ್ರಚಾರದ ಸ್ಥಳಗಳು ಹಾಗೂ ಕಾಲೇಜು ಮೈದಾನಗಳ ನಡುವೆ ಓಡಾಡಲು ಅವರು ಬಳಸುತ್ತಿದ್ದ ಈ ಬೈಕ್, ಅವರ ಯೌವನದ ವರ್ಚಸ್ಸಿನ ಸಂಕೇತವಾಗಿತ್ತು," ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಪದವಿ ಪೂರ್ಣಗೊಳ್ಳುವ ಮುನ್ನವೇ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದ ಡಿ ಕೆ ಶಿವಕುಮಾರ್, 1989ರಲ್ಲಿ ಶಾಸಕರಾಗಿ ಆಯ್ಕೆಯಾದರು. ಬಳಿಕ ಸಚಿವ ಸ್ಥಾನವೂ ದೊರೆಯಿತು. ರಾಜಕೀಯ ಜವಾಬ್ದಾರಿಗಳು ಹೆಚ್ಚಾಗುತ್ತಿದ್ದಂತೆ, ಯೆಜ್ದಿ ಬೈಕ್ ಸದಾಶಿವನಗರದ ನಿವಾಸದ ಒಂದು ಮೂಲೆಯಲ್ಲಿ ನಿಂತು ತುಕ್ಕು ಹಿಡಿಯತೊಡಗಿತು.

ಒಂದು ದಿನ ಡಿ ಕೆ ಶಿವಕುಮಾರ್ ಅವರ ಆಪ್ತ ಸ್ನೇಹಿತ ಶ್ಯಾಮ್ ಆ ಬೈಕ್‌ನ್ನು ಗಮನಿಸಿ, ಹಳೆಯ ನೆನಪುಗಳಿಗೆ ಮರುಳಾದರು. ಅದನ್ನು ಮರುಜೀವ ನೀಡುವ ಆಸೆಯನ್ನು ಡಿ ಕೆ ಶಿವಕುಮಾರ್ ಅವರ ವಿಶ್ವಾಸಾರ್ಹ ಸಹಾಯಕ ರಾಜಶೇಖರ್ ಅವರೊಂದಿಗೆ ಹಂಚಿಕೊಂಡರು ಎಂದು ಪುಸ್ತಕ ಹೇಳುತ್ತದೆ.

ಶ್ಯಾಮ್ ಅವರ ಕುಟುಂಬ ಸ್ನೇಹಿತರ ಪುತ್ರ ಹಾಗೂ ಹಳೆಯ ಮಾದರಿಯ ಬೈಕ್‌ಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಸುಪ್ರೀತ್ ನಾಯಕ್ ಅವರಿಗೆ ಬೈಕ್ ಮರುಸ್ಥಾಪನೆಯ ಜವಾಬ್ದಾರಿ ನೀಡಲಾಯಿತು.

ಈ ಮರುಸ್ಥಾಪನೆಗಾಗಿ ಅಗತ್ಯ ಬಿಡಿಭಾಗಗಳನ್ನು ಹುಡುಕುವ ಕಾರ್ಯ ಹಲವು ನಗರಗಳು ಹಾಗೂ ದೇಶಗಳವರೆಗೂ ಸಾಗಿತು. ಚೆನ್ನೈ, ಮೈಸೂರು, ಮುಂಬೈ ಹಾಗೂ ವಿಯೆಟ್ನಾಂನಿಂದಲೂ ಕೆಲವು ಬಿಡಿಭಾಗಗಳನ್ನು ತರಿಸಲಾಯಿತು.

ಬ್ಯಾಟರಾಯನಪುರ ಮತ್ತು ಕತ್ರಿಗುಪ್ಪೆಯ ಪರಿಣಿತ ಮೆಕ್ಯಾನಿಕ್‌ಗಳು ಸುಮಾರು ಆರು ತಿಂಗಳ ಕಾಲ ಶ್ರಮಿಸಿ ಬೈಕ್‌ಗೆ ಹೊಸ ಜೀವ ತುಂಬಿದರು. ಹಳೆಯ ದಿನಗಳ ನೆನಪುಗಳನ್ನು ಮೆಲುಕು ಹಾಕುವಂತೆ ಯೆಜ್ಡಿ ರೋಡ್‌ಕಿಂಗ್ ಬೈಕ್ ಮತ್ತೆ ಘರ್ಜಿಸತೊಡಗಿತು.

2024ರ ಜೂನ್ 3ರಂದು ವೈಯಕ್ತಿಕ ಕಾರ್ಯಕ್ರಮವೊಂದಕ್ಕಾಗಿ ಬೆಂಗಳೂರಿನ ಜೆ.ಪಿ.ನಗರಕ್ಕೆ ತೆರಳಿದ್ದ ಡಿ ಕೆ ಶಿವಕುಮಾರ್ ಅವರಿಗೆ ಅಚ್ಚರಿಯೊಂದು ಕಾದಿತ್ತು.

ಶ್ಯಾಮ್ ಮತ್ತು ಸುಪ್ರೀತ್ ಅವರನ್ನು ಹೊರಗೆ ಕರೆದುಕೊಂಡು ಹೋದಾಗ, ಹೊಸದಾಗಿ ಮರುಸ್ಥಾಪಿಸಲಾದ ಯೆಜ್ದಿ ರೋಡ್‌ಕಿಂಗ್ ಹೊಳೆಯುತ್ತ ನಿಂತಿತ್ತು.

"ಶಿವಕುಮಾರ್ ಅವರ ಕಣ್ಣುಗಳಲ್ಲಿ ಸಂತೋಷ ಮಿನುಗಿತು. ಅವರು ಬೈಕ್ ಸುತ್ತಲೂ ತಿರುಗಿ ನೋಡಿದರು. ಪ್ರೀತಿಯಿಂದ ಸ್ಪರ್ಶಿಸಿ ಕಿಕ್ ಹೊಡೆದರು. ಎಂಜಿನ್ ಘರ್ಜಿಸುತ್ತಿದ್ದಂತೆ ನಗುತ್ತಾ ಸ್ವಲ್ಪ ರೇಸ್ ನೀಡಿ, ಫೋಟೋಗಳಿಗೆ ಪೋಸ್ ನೀಡಿ, 'ಬೈಕ್‌ನ್ನು ಮನೆಗೆ ಕಳುಹಿಸಿ' ಎಂದು ಹೇಳಿದರು," ಎಂದು ಪುಸ್ತಕ ವಿವರಿಸುತ್ತದೆ.

2024ರ ಸೆಪ್ಟೆಂಬರ್ 1ರಂದು ಸದಾಶಿವನಗರದ ನಿವಾಸದಲ್ಲಿ ಬೈಕ್‌ನ್ನು ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಈ ವೇಳೆ ಶ್ಯಾಮ್, ಯುವಕನಾಗಿದ್ದಾಗ ಹಳೆಯ ಬೈಕ್ ಮೇಲೆ ಕುಳಿತಿದ್ದ ಫೋಟೋ ಹಾಗೂ ಮರುಸ್ಥಾಪಿತ ಬೈಕ್ ಮೇಲಿರುವ ಹೊಸ ಫೋಟೋವನ್ನು ಉಡುಗೊರೆಯಾಗಿ ನೀಡಿದರು.

ಬೈಕ್‌ನ್ನು ಮತ್ತೆ ಸ್ಟಾರ್ಟ್ ಮಾಡಿದ ಡಿ ಕೆ ಶಿವಕುಮಾರ್ ಮಗುವಿನಂತಹ ಉತ್ಸಾಹದಿಂದ ಖುಷಿಪಟ್ಟ ಕ್ಷಣವನ್ನು ಮಾಧ್ಯಮಗಳು ಸೆರೆಹಿಡಿದವು ಎಂದು ಪುಸ್ತಕ ಹೇಳುತ್ತದೆ.

ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಪ್ರಯತ್ನವನ್ನು ಮೆಚ್ಚಿ, "ಐತಿಹಾಸಿಕ ವೈಯಕ್ತಿಕ ಪರಂಪರೆಯನ್ನು ಉಳಿಸಿಕೊಂಡಿರುವುದು ಶ್ಲಾಘನೀಯ" ಎಂದು ಪ್ರಶಂಸಿಸಿದ್ದರು.

ಇದೀಗ ಆ ಯೆಜ್ಡಿ ರೋಡ್‌ಕಿಂಗ್ ಬೈಕ್ ಡಿ ಕೆ ಶಿವಕುಮಾರ್ ಅವರ ನಿವಾಸದ ಊಟದ ಕೋಣೆಯಲ್ಲಿ ವಿಶೇಷ ಸ್ಥಳದಲ್ಲಿ ಕುಟುಂಬದ ಅಮೂಲ್ಯ ನೆನಪಿನ ಚಿಹ್ನೆಯಂತೆ ಪ್ರದರ್ಶನಕ್ಕಿಡಲಾಗಿದೆ.

ಈ ಬೈಕ್ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದು 2025ರ ಆಗಸ್ಟ್ 19ರಂದು. ಹೆಬ್ಬಾಳ ಜಂಕ್ಷನ್‌ನ ನೂತನ ಮೇಲ್ಸೇತುವೆ ಉದ್ಘಾಟನೆಯ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಿಬ್ಬನ್ ಕತ್ತರಿಸಿದ ಬಳಿಕ, ಸುಮಾರು 40 ವರ್ಷ ಹಳೆಯದಾದ ತಮ್ಮ ಯೆಜ್ದಿ ರೋಡ್‌ಕಿಂಗ್ ಮೇಲೆ, ಯೌವನದಲ್ಲಿ ಧರಿಸುತ್ತಿದ್ದ ಖಾದಿ ಉಡುಪಿನಲ್ಲೇ ಏರಿ ಮೇಲ್ಸೇತುವೆಯ ಮೇಲೆ ಸವಾರಿ ನಡೆಸಿದರು.

ಹೆಬ್ಬಾಳ ಮೇಲ್ಸೇತುವೆಯಲ್ಲಿ ಡಿ ಕೆ ಶಿವಕುಮಾರ್ ಬೈಕ್ ರೈಡ್

"ಹೊಸ ಮೇಲ್ಸೇತುವೆಯ ಮೇಲೆ ಯೆಜ್ದಿ ಎಂಜಿನ್‌ನ ಪರಿಚಿತ ಘರ್ಜನೆ ಪ್ರತಿಧ್ವನಿಸಿತು. ಬೈಕ್‌ನ ಅದ್ಭುತ ಸ್ಥಿತಿಯನ್ನು ಕಂಡು ಸಿದ್ದರಾಮಯ್ಯ ಅಚ್ಚರಿಗೊಂಡರು. ಅದಕ್ಕಿಂತಲೂ ಡಿ ಕೆ ಶಿವಕುಮಾರ್ ಅವರ ಮುಖದಲ್ಲಿದ್ದ ಆನಂದವನ್ನು ನೋಡಿ ಮತ್ತಷ್ಟು ಆಶ್ಚರ್ಯಪಟ್ಟರು," ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

"ಆ ದಿನ ಆ ಯೆಜ್ಡಿ ರೋಡ್‌ಕಿಂಗ್ ಬೈಕ್ ಕೇವಲ ಮೇಲ್ಸೇತುವೆಯನ್ನು ದಾಟಲಿಲ್ಲ. ನಾಲ್ಕು ದಶಕಗಳ ನೆನಪುಗಳು, ಸ್ನೇಹದ ಭಾವನೆಗಳು ಹಾಗೂ ಬೆಂಕಿಯಲ್ಲಿ ಬೆಂದು ಗಟ್ಟಿಯಾದ ನಾಯಕರ ಹೃದಯದಲ್ಲೂ ಮೃದುತ್ವ ಅಡಗಿರುತ್ತದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಯಿತು," ಎಂದು ಪುಸ್ತಕ ಹೇಳುತ್ತದೆ.

ರಶೀದ್ ಕಿದ್ವಾಯಿ ಅವರ ಈ ಪುಸ್ತಕವು ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿದ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುವವರೆಗಿನ ಅವರ ರಾಜಕೀಯ ಪಯಣವನ್ನು ದಾಖಲಿಸಿದೆ.

ಜೂನ್ 3ರಂದು ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದಿದ್ದ ದೀರ್ಘಕಾಲದ ಅಧಿಕಾರ ಪೈಪೋಟಿಗೆ ತೆರೆ ಎಳೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com