ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್: ಸಿದ್ದು-ಡಿಕೆಶಿ, ಹರಿಪ್ರಸಾದ್'ಗೆ 'ಕೈ' ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!

ಜೂನ್ 3ರಂದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ 13 ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದರು. ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ 20 ಸಚಿವ ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ವಿಳಂಬವಾಗಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ಮತ್ತೆ ವೇಗ ಪಡೆದಿವೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳುತ್ತಿದ್ದಂತೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ದೆಹಲಿಗೆ ಕರೆಸಿ ಮಹತ್ವದ ಸಭೆ ನಡೆಸುವ ಸಾಧ್ಯತೆ ಇದೆ.

ಸಂಪುಟದಲ್ಲಿರುವ 20 ಖಾಲಿ ಸಚಿವ ಸ್ಥಾನಗಳ ಭರ್ತಿ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇರುವುದರಿಂದ ಸಚಿವಾಕಾಂಕ್ಷಿಗಳ ಚಟುವಟಿಕೆ ತೀವ್ರಗೊಂಡಿದೆ.

ಜೂನ್ 3ರಂದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ 13 ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದರು. ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ 20 ಸಚಿವ ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ವಿಳಂಬವಾಗಿದೆ.

ಮೂಲಗಳ ಪ್ರಕಾರ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ತಮ್ಮ ಬೆಂಬಲಿಗ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮುಂದೆ ಪ್ರಸ್ತಾಪಿಸಲು ಸಜ್ಜಾಗಿದ್ದಾರೆಂದು ತಿಳಿದುಬಂದಿದೆ.

ಮತ್ತೊಂದೆಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಕೂಡ 2028ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಆಯ್ಕೆಯ ನಾಯಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತ್ಯೇಕ ಚಿಂತನೆ ನಡೆಸಿದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ಆಷಾಢ ಮಾಸ ಆರಂಭವಾಗುವ ಮೊದಲು ನಡೆಯುತ್ತದೆಯೇ ಎಂಬ ಕುತೂಹಲ ಕಾಂಗ್ರೆಸ್ ಶಾಸಕರಲ್ಲಿ ಹೆಚ್ಚಿದೆ.

ಅನೇಕರು ಆಷಾಢವನ್ನು ಶುಭಕಾರ್ಯಗಳಿಗೆ ಸೂಕ್ತವಲ್ಲದ ಸಮಯ ಎಂದು ನಂಬುತ್ತಾರೆ. ಹೀಗಾಗಿ ಆಷಾಡಕ್ಕೂ ಮುನ್ನವೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎಂದು ಶಾಸಕರು ನಂಬಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ಹೆಚ್ಚಾಗತೊಡಗಿದೆ. ಈ ಬಾರಿ ಆಷಾಢ ಮಾಸ ಜುಲೈ 14ರಿಂದ ಆರಂಭವಾಗುತ್ತಿದೆ.

ಈ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

File photo
ಆಷಾಢಕ್ಕೂ ಮುನ್ನ ಸಂಪುಟ ವಿಸ್ತರಣೆ: ಜುಲೈ13 ರಂದು ನೂತನ ಸಚಿವರ ಪ್ರಮಾಣ ವಚನ? ಕೌತುಕ ಹೆಚ್ಚಿಸಿದ ಸಿಎಂ-ಗವರ್ನರ್ ಭೇಟಿ!

ಮುಖ್ಯಮಂತ್ರಿಯೂ ಹಾಗೂ ಎಐಸಿಸಿ ಅಧ್ಯಕ್ಷರೂ ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಬರ, ಪ್ರವಾಹದಂತಹ ತುರ್ತು ಪರಿಸ್ಥಿತಿಗಳು ಎದುರಾದಾಗ ಪೂರ್ಣ ಪ್ರಮಾಣದ ಸಚಿವ ಸಂಪುಟ ಇದ್ದರೆ ಪ್ರತಿಯೊಬ್ಬ ಸಚಿವರಿಗೆ ಜವಾಬ್ದಾರಿ ಹಂಚಿ ಜನರಿಗೆ ತ್ವರಿತವಾಗಿ ನೆರವು ನೀಡಲು ಸಾಧ್ಯವಾಗುತ್ತದೆ," ಎಂದು ಹೇಳಿದ್ದಾರೆ.

ಆಷಾಢಕ್ಕೂ ಮುನ್ನವೇ ವಿಸ್ತರಣೆ ನಡೆಯುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಾನು ಅಂತಹ ನಂಬಿಕೆಗಳನ್ನು ಹೊಂದಿಲ್ಲ. ಅಧಿಕಾರ ನೀಡುವಾಗ ಅಥವಾ ಸ್ವೀಕರಿಸುವಾಗ ಆಷಾಢ ಅಥವಾ ರಾಹುಕಾಲವನ್ನು ಯಾರೂ ನೋಡುವುದಿಲ್ಲ. ಆಡಳಿತವೇ ನಮ್ಮ ಮೊದಲ ಆದ್ಯತೆ. ಪ್ರತಿಯೊಬ್ಬರಿಗೂ ಅವರವರ ನಂಬಿಕೆ ಇರಬಹುದು. ಆದರೆ ಅದು ಸರ್ಕಾರದ ಕೆಲಸಕ್ಕೆ ಅಡ್ಡಿಯಾಗಬಾರದು," ಎಂದು ಹೇಳಿದರು.

ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ ಅವರ ಪುತ್ರ ಹಾಗೂ ಜೇವರ್ಗಿ ಶಾಸಕ ಅಜಯ್ ಸಿಂಗ್ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದು, ರಾಜ್ಯ ನಾಯಕರನ್ನು ಯಾವುದೇ ಕ್ಷಣದಲ್ಲಿ ದೆಹಲಿಗೆ ಕರೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಕೂಡ ಸಚಿವ ಸ್ಥಾನಾಕಾಂಕ್ಷಿಯಾಗಿದ್ದು, ಸಂಪುಟ ವಿಸ್ತರಣೆ ಒಂದು ಅಥವಾ ಎರಡು ದಿನಗಳಲ್ಲಿ ನಡೆಯಬಹುದು ಅಥವಾ ಆಷಾಢ ಮುಗಿದ ಬಳಿಕವೂ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಶ್ರೀರಂಗಪಟ್ಟಣ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ತಾವು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದೇವೆ ಎಂದು ಹೇಳಿದ್ದಾರೆ.

"ನನಗೆ ಸಚಿವ ಸ್ಥಾನ ನೀಡಿದರೆ ಮಂಡ್ಯ ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುತ್ತೇನೆ. ನನ್ನ ಕಾರ್ಯಕ್ಷಮತೆಯಲ್ಲಿ ಕೊರತೆ ಕಂಡುಬಂದರೆ ಯಾವಾಗ ಬೇಕಾದರೂ ಸಚಿವ ಸ್ಥಾನದಿಂದ ತೆಗೆದುಹಾಕಬಹುದು," ಎಂದು ಹೇಳಿದ್ದಾರೆ.

ಮೂರು ಅಥವಾ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಎಂ. ಪಟ್ಟಣ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ಶಾಸಕರು ಕೂಡ ಸಚಿವ ಸ್ಥಾನಕ್ಕಾಗಿ ಬಹಿರಂಗವಾಗಿ ತಮ್ಮ ಹಕ್ಕು ಮಂಡಿಸಿದ್ದಾರೆ.

ಅಶೋಕ್ ಎಂ. ಪಟ್ಟಣ ಮಾತನಾಡಿ, "ರಾಹುಲ್ ಗಾಂಧಿ ಭಾನುವಾರ ಭಾರತಕ್ಕೆ ಆಗಮಿಸುತ್ತಿದ್ದಾರೆ. ಸೋಮವಾರ ಅಥವಾ ಮಂಗಳವಾರ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ದೆಹಲಿಗೆ ಕರೆಯುವ ಸಾಧ್ಯತೆ ಇದೆ. ಸಚಿವರ ಆಯ್ಕೆಯಲ್ಲಿ ಕೇವಲ ಜಾತಿ ಸಮೀಕರಣವನ್ನಷ್ಟೇ ನೋಡದೆ, ಹಿರಿತನಕ್ಕೂ ಆದ್ಯತೆ ನೀಡಬೇಕು ಎಂದು ನಾನು ಪಕ್ಷದ ನಾಯಕರಿಗೆ ಮನವಿ ಮಾಡುತ್ತೇನೆ. ನಾನು ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದ ಹಿರಿಯ ಶಾಸಕರಲ್ಲಿ ಒಬ್ಬನಾಗಿದ್ದು, ದೇವರಾಜ ಅರಸು ಅವರ ಕಾಲದಿಂದಲೇ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ," ಎಂದು ಹೇಳಿದರು.

ಇನ್ನೊಂದೆಡೆ, ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಸಿಗುತ್ತದೆಯೇ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.

ಮೊದಲ ಹಂತದ ಸಚಿವ ಸಂಪುಟ ರಚನೆಗೂ ಮುನ್ನ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಸಂಚು ರೂಪಿಸಿದ ಆರೋಪದ ಆಡಿಯೊ ಕ್ಲಿಪ್ ಸೋರಿಕೆಯಾಗಿತ್ತು. ಈ ಬೆಳವಣಿಗೆ ಅವರ ಸಚಿವ ಸ್ಥಾನಕ್ಕೆ ಅಡ್ಡಿಯಾಯಿತು ಎನ್ನಲಾಗಿತ್ತು.

ಈಗ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಮೀರ್ ಅಹ್ಮದ್ ಖಾನ್ ವಿರುದ್ಧ ನ್ಯಾಯಾಂಗ ಕ್ರಮ ಜರುಗಿಸಲು ಅನುಮತಿ ಕೋರಿ ಲೋಕಾಯುಕ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು ಮತ್ತೊಮ್ಮೆ ಅವರ ಸಚಿವ ಸ್ಥಾನಕ್ಕೆ ಅಡ್ಡಿಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಹೀಗಾಗಿ ಈ ಬಾರಿ ಜಮೀರ್ ಅವರಿಗೆ ಸಚಿವ ಸ್ಥಾನ ದೊರೆಯುತ್ತದೆಯೇ ಎಂಬುದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ಅವಲಂಬಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com