

ಬೆಂಗಳೂರು: ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸ್ವಾರ್ಥ ರಾಜಕಾರಣಕ್ಕೆ ಬಡ ಹಾಗೂ ತಳ ಸಮುದಾಯದ ಯುವಕರ ಜೀವ ಮತ್ತು ಬದುಕು ಬಲಿಯಾಗಿವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ಗಳ ಮಾಡಿರುವ ಅವರು, ಧರ್ಮ ರಕ್ಷಣೆಯ ಹೆಸರಿನಲ್ಲಿ ಪ್ರಚೋದನೆಗೆ ಒಳಗಾದ ಯುವಕರು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿರುವುದು ದುರಂತ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರದ ಸ್ವಾರ್ಥ ಸಾಧನೆಗೆ ಬಡವರ ಮನೆಯ ಮಕ್ಕಳ ಜೀವಗಳಷ್ಟೇ ಅಲ್ಲ, ಅವರ ಬದುಕುಗಳೂ ಬಲಿಯಾಗಿವೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಸಾವನ್ನಪ್ಪಿದವರದ್ದು ಒಂದು ಕತೆಯಾದರೆ, ಬದುಕುಳಿದವರದ್ದೂ ಮತ್ತೊಂದು ಕರುಣಾಜನಕ ಕಥೆಯಾಗಿದೆ.
ವೇದಿಕೆಗಳ ಮೇಲೆ ಪ್ರಚೋದನಾತ್ಮಕ ಭಾಷಣ ಮಾಡುವ ನಾಯಕರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ, ಆ ಭಾಷಣಗಳಿಗೆ ಚಪ್ಪಾಳೆ ತಟ್ಟಿ ಬೀದಿಗಿಳಿದ ಬಡ ಯುವಕರ ಬದುಕು ಮಾತ್ರ ಶೋಚನೀಯ ಸ್ಥಿತಿಗೆ ತಲುಪಿದೆ.
ಬಡ ಮತ್ತು ತಳ ಸಮುದಾಯದ ಯುವಕರು ತಮ್ಮ ಬದುಕು ಕಟ್ಟಿಕೊಳ್ಳಬೇಕಾದ ವಯಸ್ಸಿನಲ್ಲಿ ಅವರನ್ನು ಪ್ರಚೋದನಾತ್ಮಕ ಭಾಷಣಗಳ ಮೂಲಕ ದಿಕ್ಕುತಪ್ಪಿಸಿ, ತ್ರಿಶೂಲ ದೀಕ್ಷೆ ನೀಡಿ ಬೀದಿಗಿಳಿಸಲಾಯಿತು. ಆದರೆ, ಅವರನ್ನು ಪ್ರಚೋದಿಸಿದ ವೇದಿಕೆ ಭಾಷಣಕಾರರು ಒಂದು ದಿನವೂ ಈ ಯುವಕರ ಜೀವನದ ಬಗ್ಗೆ ಕನಿಕರ ತೋರಲಿಲ್ಲ. ಅವರ ಸಂಕಷ್ಟಕ್ಕೆ ಆರ್ಥಿಕ ಅಥವಾ ಕಾನೂನು ನೆರವು ನೀಡಲಿಲ್ಲ ಎಂದು ಟೀಕಿಸಿದ್ದಾರೆ.
ಪ್ರಚೋದನಾತ್ಮಕ ಭಾಷಣ ಮಾಡಿದವರು ಎಂದಿಗೂ ಬಂಧನಕ್ಕೊಳಗಾಗಲಿಲ್ಲ. ಅವರ ಮನೆಯ ಮಕ್ಕಳು ಕೂಡ ಧರ್ಮ ರಕ್ಷಣೆಯ ಹೆಸರಿನಲ್ಲಿ ಬೀದಿಗಿಳಿದಿಲ್ಲ.
"ಬಡವರ ಮಕ್ಕಳು ಪ್ರಕರಣಗಳಲ್ಲಿ ಸಿಲುಕಿ ನ್ಯಾಯಾಲಯಗಳ ಅಲೆದಾಡುವ ಪರಿಸ್ಥಿತಿ ಬಂದಾಗ ಅವರಿಗೆ ಕಾನೂನು ನೆರವು ನೀಡಲಿಲ್ಲ. ಆರ್ಥಿಕ ನೆರವನ್ನೂ ಒದಗಿಸಲಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನೀಡಿದ ಧರ್ಮ ರಕ್ಷಣೆಯ ನಶೆಗೆ ಒಳಗಾದವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ತಮ್ಮ ಬದುಕನ್ನು ಕಳೆದುಕೊಂಡಿದ್ದಕ್ಕೆ ನೋವು ಅನುಭವಿಸುತ್ತಿದ್ದಾರೆ. ಮೃತಪಟ್ಟವರ ಕುಟುಂಬಗಳೂ ತಮ್ಮ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ಬದುಕುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
ಈಗಿನ ತಳ ಸಮುದಾಯಗಳ ಯುವಕರು ಈ ಘಟನೆಗಳಿಂದ ಪಾಠ ಕಲಿತು ತಮ್ಮ ಜೀವನದ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.