

ನವದೆಹಲಿ: ಬಿಡದಿ ಟೌನ್‌ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ಜಟಾಪಟಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಾನು ಐದು ಟೌನ್‌ಶಿಪ್ ಮಾಡಲು ನಿರ್ಧರಿಸಿದ್ದೆ, ಆದ್ರೆ ನಿಮ್ಮ ರೀತಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಿಲ್ಲ ಎಂದು ಕುಮಾರಸ್ವಾಮಿ ಬುಧವಾರ ತಿರುಗೇಟು ನೀಡಿದ್ದಾರೆ.
ಇಂದು ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಐದು ಟೌನ್ ಶಿಪ್ ಮಾಡಲು ನಾನು ನಿರ್ಧಾರ ಮಾಡಿದ್ದೆ, ಇದನ್ನ ನೂರಾರು ಬಾರಿ ಹೇಳಿದ್ದೇನೆ ಎಂದು ತಿರುಗೇಟು ನೀಡಿದರು.
ಬಿಡದಿ ಯೋಜನೆಯ ಪಿತಾಮಹ ನಾನಲ್ಲ, ಇದು ನನ್ನ ಕನಸಿನ ಯೋಜನೆಯೂ ಅಲ್ಲ, ಇದರ ಅವಶ್ಯಕತೆಯೇ ಇಲ್ಲ ಎಂದು ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಎಚ್‌ಡಿಕೆ, ಯೋಜನೆಯ ಅವಶ್ಯಕತೆಯೇ ಇಲ್ಲ ಎಂದಾದರೆ ಇದಕ್ಕೆ ಕೈ ಹಾಕಿದ್ದು ಯಾಕೆ? ಯಾರು ಇವರಿಗೆ ಇದನ್ನು ಮಾಡಲು ಹೇಳಿದ್ದು? ಎಂದು ನೇರವಾಗಿ ಪ್ರಶ್ನಿಸಿದರು.
ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾದ ದಿನದಿಂದ ಸ್ವಂತಿಕೆ ಅನ್ನೊದೇ ಇಲ್ಲ. ವಿಧಾನಸೌಧದ ಮೆಟ್ಟಿಲಿಗೆ ಗೌರವ ಸಲ್ಲಿಸಿದ್ದು ಕಾಪಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಾಪಿ ಮಾಡಿದ್ದಾರೆ ಎಂದು ಕುಟುಕಿದರು.
ಈ ಹಿಂದೆ ಎಂ.ಬಿ. ಪಾಟೀಲ್ ಅವರು ಕೈಗಾರಿಕೆ ಸಚಿವರಾಗಿದ್ದಾಗ ಭೂಮಿ ಹಂಚಿಕೆಗೆ ಯಾವ ಏಜೆಂಟ್‌ಗಳನ್ನು ಇಟ್ಟುಕೊಂಡಿದ್ದರು ಎಂದು ಪ್ರಶ್ನಿಸಿದ ಅವರು, ತಾವೆಂದೂ ಆಡಳಿತದಲ್ಲಿ ಏಜೆಂಟರನ್ನು ಇಟ್ಟುಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಒಂದೂವರೆ ಲಕ್ಷ ರೂ. ಗೆ ಭೂಮಿ ಕೊಟ್ಟಿದ್ದರು ಎಂದು ಸಿಎಂ ಹೇಳುತ್ತಿದ್ದಾರೆ, ಅದಕ್ಕಿಂದು ಕೋಟ್ಯಾಂತರ ರೂಪಾಯಿ ಬೆಲೆ ಇರಬಹುದು. ಆದರೆ ಆವತ್ತು ರೈತರು ಭೂಮಿಗಾಗಿ ಹೋರಾಟ ಮಾಡಿರಲಿಲ್ಲ. ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾದರೂ ಬೆಂಗಳೂರಿನ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ತಂದಿದ್ದು ನಿಜ. 2006 ರಲ್ಲೇ ಇನರ್ ರಿಂಗ್ ರೋಡ್, ರಾಜಾಕಾಲುವೆ ಮೇಲೆ ರಸ್ತೆ ಹಾಗೂ 9 ಟೌನ್‌ಶಿಪ್‌ಗಳನ್ನು ಮಾಡುವುದಾಗಿ ಘೋಷಿಸಿ, ಅದರಲ್ಲಿ 5 ಟೌನ್‌ಶಿಪ್‌ಗಳನ್ನು ಮಾಡಲು ನಿರ್ಧರಿಸಿದ್ದೆ ಎಂದರು.
ನಾನು ರೈತರಿಗೆ ನೋವು ಕೊಟ್ಟು ಒಕ್ಕಲೆಬಿಸುವುದಿಲ್ಲ, ಯೋಜನೆ ಮುಂದುವರಿಸಲ್ಲ ಎಂದು ನಾನು ಹೇಳಿದ್ದೆ. ಇವತ್ತು ಭೂಮಿ ಒತ್ತಾಯದಿಂದ ಪಡೆಯಲ್ಲ ಎಂದು ಸಿಎಂ ಹೇಳಿದ್ದಾರೆ. ಸಮಿತಿ ರಚನೆ ಮಾಡಿ ವರದಿ ನೀಡಲು ಸಮಯ ನೀಡುವುದಾಗಿ ಹೇಳಿದ್ದಾರೆ. ಯಾರ ನೇತೃತ್ವದಲ್ಲಿ ಸಮಿತಿ ರಚನೆ ಮಾಡ್ತಾರೆ? ನನ್ನದೂ ಜಮೀನು ಕೇತಾಗನಹಳ್ಳಿಯಲ್ಲಿದೆ. ಅಸೂಯೆ ಪಡೋದು ನನ್ನ ಚಾಳಿ ಅಲ್ಲ. ನಾನು ಸಿನಿಮಾದಲ್ಲಿ ಇದ್ದಾಗಲೇ ಜಮೀನು ಖರೀದಿಸಿದ್ದೆ. ಈವರೆಗೂ ಪೋಡಿ ಆಗಿಲ್ಲ, ನಾನು ಯಾರಿಗೂ ಬೆದರಿಸಿಲ್ಲ? ಎಂದು ಹೇಳಿದರು.
ಈ ಬಿಡದಿ ಯೋಜನೆಯ ಬಗ್ಗೆ ಯೋಚನೆ ಮಾಡಿದಾಗ ತಾವು ಏಕಾಏಕಿ ರೈತರನ್ನು ಹೊರಹಾಕುವ ಕೆಲಸ ಮಾಡಲಿಲ್ಲ. ಬಿಡದಿ ಭಾಗದ ರೈತರು ಹಾಗೂ ಮುಖಂಡರ ಜೊತೆ ಮೂರು ಬಾರಿ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಕೇಳಿದ್ದಾಗಿ ಕುಮಾರಸ್ವಾಮಿ ನೆನಪಿಸಿಕೊಂಡರು. ಆದರೆ ಪ್ರಸ್ತುತ ಸರ್ಕಾರವು ನ್ಯಾಷನಲ್ ಪಬ್ಲಿಕ್ ಸ್ಕೂಲ್ (NPS) ವಿಚಾರದಲ್ಲಿ ಮಾಡಿದಂತೆ, ಸರ್ಕಾರಿ ದಾಖಲೆಗಳನ್ನು ಕದ್ದು, ದಾಖಲೆಗಳು ಮಿಸ್ಸಿಂಗ್ ಎಂದು ಹೇಳಿ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ಗಂಭೀರ ಆರೋಪ ಮಾಡಿದರು.