

ಕೆಲವರಿಗೆ ಬೇಸಿಕ್ ಕಾಮನ್ ಸೆನ್ಸ್ ಇಲ್ಲ, ನೀವು ನಮ್ಮ ಕೆಲಸ ಮಾಡಿಕೊಟ್ಟಿಲ್ಲ ಎಂದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಬುದ್ಧಿ ಕಲಿಸ್ತೀವಿ ಅಂತಾರೆ, ಯಾರು ಬುದ್ಧಿ ಕಲಿಸ್ತಾರೆ? ಜನರಿಗೆ ಸಹಾಯ ಮಾಡಲು ನನಗೆ ದೇವರು ಅಧಿಕಾರ ಕೊಟ್ಟಿದ್ದಾನೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಕರ್ನಾಟಕ ಅಪಾರ್ಟ್‌ಮೆಂಟ್ (Ownership and Management) ಮಸೂದೆ-2026 ಕುರಿತು ನಡೆದ ಸಮಾಲೋಚನಾ ಸಭೆಯ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್, ನಾನು ನೆಗೆಟಿವ್ ವಿಚಾರಗಳನ್ನು ನೋಡುವುದಿಲ್ಲ, ಯಾವಾಗಲೂ ಪಾಸಿಟಿವ್ ವಿಚಾರಗಳನ್ನೇ ನೋಡುತ್ತೇನೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಾವಿಲ್ಲಿದ್ದೇವೆ, ನಾವು ಅದನ್ನ ಮಾಡುತ್ತೇವೆ. ನಿಮಗೆ ಸಮಸ್ಯೆಯಾಗಲು ನಾವು ಬಯಸುವುದಿಲ್ಲ. ನೀವು ಜೀವನವಿಡೀ ಕಷ್ಟಪಟ್ಟು ದುಡಿದು ಸಂಪಾದಿಸಿದ ಆಸ್ತಿಯನ್ನು ಉಳಿಸಿಕೊಳ್ಳಲು ನಾವು ನೆರವಾಗುತ್ತೇವೆ ಎಂದರು.
ಬೆಂಗಳೂರಿನಂಥ ನಗರದಲ್ಲಿ ಸ್ವಂತಕ್ಕೊಂದು ಸೂರು ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಇಡೀ ಪ್ರಪಂಚ ಬೆಂಗಳೂರು ನೋಡ್ತಾ ಇದೆ, ಮುಂಬೈ, ಡೆಲ್ಲಿಯಂಥಹ ದೊಡ್ಡ ಸಿಟಿಗಳಲ್ಲಿರುವ ಆಸ್ತಿ, ಮನೆ ಮಾರಿಕೊಂಡು ಬೆಂಗಳೂರಿನ ಸಂಸ್ಕೃತಿ, ಹವಾಮಾನ, ಶಿಕ್ಷಣ, ಉದ್ಯೋಗಾವಕಾಶಗಳಿಗೆ ಮನಸೋತು ಇಲ್ಲಿಗೆ ಬರುತ್ತಾರೆ. ಅಲ್ಲಿ 20-25 ಕೋಟಿಗೆ ನೀಡಬೇಕಾದ ಮನೆಗೆ ಬೆಂಗಳೂರಿನಲ್ಲಿ 2ರಿಂದ 5 ಕೋಟಿಗೆ ಸಿಗುತ್ತದೆ, ಇದು ಬೆಂಗಳೂರು ನಗರದ ಅನುಕೂಲ, ಸೌಂದರ್ಯ ಎಂದು ಡಿ ಕೆ ಶಿವಕುಮಾರ್ ಹೊಗಳಿದರು.