

ನವದೆಹಲಿ: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಬುಧವಾರ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದ್ದು, ಈ ಬಾರಿ ಹೊಸ ಸಮೀಕರಣದೊಂದಿಗೆ, ಸಚಿವ ಸ್ಥಾನ ಭರ್ತಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ ಒಂದೇ ವಿಮಾನದಲ್ಲಿ ದೆಹಲಿಯಲ್ಲಿ ತೆರಳಿದ್ದು, ಇಂದೇ ನೂತನ ಸಚಿವರ ಪಟ್ಟಿ ಅಂತಿಮವಾಗುವ ಸಾಧ್ಯತೆ ಇದೆ.
ಈ ಮೂವರು ನಾಯಕರು ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ಹಾರಿದ್ದು, ಕಾಂಗ್ರೆಸ್‌ನ ಉನ್ನತ ನಾಯಕರೊಂದಿಗೆ ಚರ್ಚೆ ನಡೆಸಿ, ಎರಡನೇ ಹಂತದಲ್ಲಿ ಸಂಪುಟ ಸೇರುವ ಸಚಿವರ ಪಟ್ಟಿಯನ್ನು ಅಂತಿಗೊಳಿಸಲಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸೂಚನೆಯ ಮೇರೆಗೆ ಈ ಮೂವರು ನಾಯಕರು ದೆಹಲಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಮೂವರು ನಾಯಕರು ಇಂದು ಬೆಳಗ್ಗೆ 11.30ಕ್ಕೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲಿದ್ದು, ಈ ಸಭೆಯಲ್ಲಿ ನೂತನ ಸಚಿವರ ಪಟ್ಟಿಗೆ ಅಂತಿಮ ಒಪ್ಪಿಗೆ ದೊರೆಯುವ ನಿರೀಕ್ಷೆಯಿದೆ.
ಮೂರ್ನಾಲ್ಕು ಹಿರಿಯ ಸಚಿವರು ಸಂಪುಟದಲ್ಲಿ ಇರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಿರುವ ಹಿನ್ನಲೆಯಲ್ಲಿ, ಹೊಸ ಪಟ್ಟಿಯೊಂದಿಗೆ, ಸಿಎಂ ಡಿಕೆ ಶಿವಕುಮಾರ್ ಅವರು ಇಂದು ದೆಹಲಿಗೆ ಪ್ರಯಾಣಿಸಿದ್ದಾರೆ ಎಂದು ಹೇಳಲಾಗುತ್ತಿದೆ.