ವಿಧಾನ ಪರಿಷತ್‌, ರಾಜ್ಯಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟ; ಜೂನ್ 18ರಂದು ಮತದಾನ, ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೇ ದಿನ..!

ವಿಧಾನ ಪರಿಷತ್‌ನ ಏಳು ಸ್ಥಾನಗಳು ಹಾಗೂ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಜೂನ್ 18ರಂದು ಮತದಾನ ನಡೆಯಲಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವ ನಡುವೆಯೇ ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಗಳಿಗೂ ಮುಹೂರ್ತ ನಿಗದಿಯಾಗಿದೆ.

ವಿಧಾನ ಪರಿಷತ್‌ನ ಏಳು ಸ್ಥಾನಗಳು ಹಾಗೂ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಜೂನ್ 18ರಂದು ಮತದಾನ ನಡೆಯಲಿದೆ.

ಅಧಿಸೂಚನೆಯಂತೆ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದೆ. ಜೂನ್ 9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂನ್ 11ರವರೆಗೆ ಉಮೇದುವಾರರು ತಮ್ಮ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶವಿದೆ.

ಜೂನ್ 18ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿಧಾನಸೌಧದಲ್ಲಿ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಚುನಾವಣಾ ಪ್ರಕ್ರಿಯೆ ಜೂನ್ 20ರೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

File photo
ರಾಜ್ಯಸಭಾ ಚುನಾವಣೆ: ಎಚ್.ಡಿ ದೇವೇಗೌಡಗೆ NDA ಟಿಕೆಟ್..? ಮತ್ತೊಮ್ಮೆ ದೆಹಲಿ ಮೆಟ್ಟಿಲೇರುತ್ತಾರಾ 'ಮಣ್ಣಿನ ಮಗ'?

ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದ್ದು, ನಿರ್ದೇಶಕ ಬಿ.ಎಸ್. ಮಹಾಲಿಂಗೇಶ್ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ವಿಧಾನ ಪರಿಷತ್ ಚುನಾವಣೆ ಆಡಳಿತಾರೂಢ ಕಾಂಗ್ರೆಸ್‌ಗೆ ಮಹತ್ವದ್ದಾಗಿದೆ. ಎಂಎಲ್‌ಸಿಗಳನ್ನು ವಿಧಾನಸಭಾ ಸದಸ್ಯರೇ ಆಯ್ಕೆ ಮಾಡುವ ಕಾರಣ, ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್‌ಗೆ ಮೇಲುಗೈ ಸಾಧಿಸುವ ಅವಕಾಶವಿದೆ. ಇದರಿಂದ ವಿಧಾನ ಪರಿಷತ್‌ನಲ್ಲೂ ಕಾಂಗ್ರೆಸ್ ಬಲ ಹೆಚ್ಚಲಿದ್ದು, ಸರ್ಕಾರ ಮಂಡಿಸುವ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಲು ಸಾಧ್ಯವಾಗಲಿದೆ.

ಇನ್ನೊಂದೆಡೆ, ರಾಜ್ಯಸಭೆಯ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ದೇವೇಗೌಡ, ಈರಣ್ಣ ಕಡಾಡಿ ಹಾಗೂ ನಾರಾಯಣ ಕೊರಗಪ್ಪ ಅವರ ಅವಧಿ ಜೂನ್ 25ರಂದು ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 8 ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಹೊಸ ಮುಖ್ಯಮಂತ್ರಿ ಆಯ್ಕೆ ಹಾಗೂ ಸಚಿವ ಸಂಪುಟ ರಚನೆ ಪ್ರಕ್ರಿಯೆಯ ನಡುವೆಯೇ ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗಳ ರಾಜಕೀಯ ಚಟುವಟಿಕೆಗಳು ರಾಜ್ಯ ರಾಜಕೀಯಕ್ಕೆ ಮತ್ತಷ್ಟು ಚೈತನ್ಯ ತುಂಬಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com