

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುವಂತೆ ಮಾಡಬೇಕು ಎಂದು ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಕರ್ನಾಟಕ ಮುಸ್ಲಿಂ ಅಭಿವೃದ್ಧಿ ನಿಗಮ (ಕೆಎಂಡಿಸಿ) ಮಾಜಿ ನಿರ್ದೇಶಕ ಮೊಹಮ್ಮದ್ ಸಿರಾಜ್ ಅವರಿಗೆ ಸೂಚಿಸಿದ್ದಾರೆ ಎಂಬ ಆಡಿಯೋ ವೈರಲ್ ಆಗಿದ್ದು, ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಮತ್ತು ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಮತ್ತು ದಾವಣಗೆರೆಯ ಮಾಜಿ ಮೇಯರ್ ಚಮನ್ ಸಾಬ್ , ಜಮೀರ್ ಅವರನ್ನು ಕಾಂಗ್ರೆಸ್‌ನಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.
“ಮಡಿಕೇರಿಯಿಂದ ಬಂದ ಎಸ್‌ಡಿಪಿಐ ಅಭ್ಯರ್ಥಿ ಹಣ ಹಂಚಿದರು. ದಾವಣಗೆರೆಗೆ ಬರಲು ಹಣವಿಲ್ಲದ ವ್ಯಕ್ತಿಗೆ ಕೋಟಿ ರೂ. ಹೇಗೆ ಸಿಕ್ಕಿತು? ಆ ಅಭ್ಯರ್ಥಿ ಪ್ರತಿ ಮತಕ್ಕೆ 2,000 ರೂ. ಹಂಚಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ನನಗೆ ಹೇಳಿದರು. ಅವರಿಗೆ ಯಾರು ಹಣಕಾಸು ಒದಗಿಸಿದರು? ಎಂದು ಪ್ರಶ್ನಿಸಿದ ಬಸವರಾಜು, ಈಗ ಎಐ ತಂತ್ರಜ್ಞಾನವನ್ನು ದೂಷಿಸಬಾರದು ಎಂದು ಹೇಳಿದರು.
ಆಡಿಯೋ ಕ್ಲಿಪ್ ಅನ್ನು ತನಿಖೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು ಎಂದು ಬಸವರಾಜು ಒತ್ತಾಯಿಸಿದರು. ಆಡಿಯೋ ಕ್ಲಿಪ್ ನಕಲಿಯಾಗಿದ್ದರೆ ದೇವರ ಮುಂದೆ ಪ್ರಮಾಣ ಮಾಡಬೇಕು ಎಂದು ಜಮೀರ್ ಅವರಿಗೆ ಮಾಜಿ ಮೇಯರ್ ಚಮನ್ ಸಾಬ್ ಸವಾಲು ಹಾಕಿದರು.
"ಚಾಮರಾಜಪೇಟೆಯ ಕಾರ್ಯಕರ್ತರು ಬಂದು ಎಸ್‌ಡಿಪಿಐ ಪರ ಪ್ರಚಾರ ಮಾಡಿದ್ದಾರೆ. ಬಿಜೆಪಿಗೆ ಗೆಲುವು ಸಾಧಿಸುವುದು ಅವರ ಏಕೈಕ ಕಾರ್ಯಸೂಚಿಯಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ಡಿಕೆ ಸುರೇಶ್ ಮತ್ತು ಜಮೀರ್ ಅಹ್ಮದ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆಡಿಯೋ ಸೋರಿಕೆ ಕುರಿತು ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
Advertisement