ಖಾತೆ ಹಂಚಿಕೆ ಕಿಚ್ಚು: ರಾಮಲಿಂಗಾ ರೆಡ್ಡಿ ಬೆನ್ನಲ್ಲೇ ಮುನಿಯಪ್ಪ ಅಸಮಾಧಾನ; ಹೈಕಮಾಂಡ್ ಮನವೊಲಿಕೆ ಬಳಿಕ 'I am happy' ಎಂದ ಸಚಿವ

ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿದ್ದೆ. ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಐ ಆ್ಯಮ್ ಹ್ಯಾಪಿ.
KH Muniyappa
ಕೆಎಚ್ ಮುನಿಯಪ್ಪ
Updated on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಹೊಸ ಸಚಿವ ಸಂಪುಟ ರಚನೆಯಾದ 24 ಗಂಟೆಗಳಲ್ಲೇ ಸಚಿವ ಖಾತೆ ಹಂಚಿಕೆ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದ್ದು, ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸರ್ಕಾರಕ್ಕೆ ದೊಡ್ಡ ಮುಜುಗರ ಉಂಟುಮಾಡಿದೆ.

ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಮಲಿಂಗಾ ರೆಡ್ಡಿ, ತಮಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಅಂತಿಮವಾಗಿ ಆ ಖಾತೆಯನ್ನು ಕೃಷ್ಣ ಬೈರೇಗೌಡ ಅವರಿಗೆ ನೀಡಲಾಗಿದ್ದು, ಬದಲಾಗಿ ಜಲಸಂಪನ್ಮೂಲ ಇಲಾಖೆಯನ್ನು ನೀಡಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ರೆಡ್ಡಿ, "ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಮುಂದೆಯೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಹಾಗೂ ಶಾಸಕರಾಗಿ ಸೇವೆ ಮುಂದುವರಿಸುತ್ತೇನೆ" ಎಂದು ಉಲ್ಲೇಖಿಸಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಯಾವುದೇ ಖಾತೆಗಾಗಿ ಬೇಡಿಕೆ ಇಟ್ಟಿರಲಿಲ್ಲ. ಆದರೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವುದಾಗಿ ಎರಡು ಬಾರಿ ಭರವಸೆ ನೀಡಲಾಗಿತ್ತು. ಎರಡೂ ಬಾರಿ ಆ ಭರವಸೆ ಈಡೇರಿಲ್ಲ. ಅದೇ ನನ್ನ ನೋವಿಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

KH Muniyappa
Watch | ಮುನಿಯಪ್ಪ ಈಸ್ ಹ್ಯಾಪಿ ನೌ; ರಾಮಲಿಂಗಾ ರೆಡ್ಡಿಗೆ ಮಾತು ಕೊಟ್ಟಿದ್ದು ನಿಜ!

ರಾಮಲಿಂಗಾ ರೆಡ್ಡಿ ಅವರು ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಗೃಹ ಖಾತೆ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನೂ ಅವರು ನಿರ್ವಹಿಸಿದ್ದರು.

ಇತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಮುಂದಾಗಿದ್ದು, "ರಾಮಲಿಂಗಾ ರೆಡ್ಡಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಬಗ್ಗೆ ನಾನು ಹಿಂದೆ ಮಾತು ಕೊಟ್ಟಿದ್ದೆ. ಆದರೆ, ಈ ಬಾರಿ ಖಾತೆ ಹಂಚಿಕೆ ಪಕ್ಷದ ಹೈಕಮಾಂಡ್ ಹಾಗೂ ಹಿರಿಯ ನಾಯಕರ ನಿರ್ಧಾರದಂತೆ ನಡೆದಿದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಹಿರಿಯ ಸಚಿವ ಕೆ.ಹೆಚ್.ಮುನಿಯಪ್ಪ ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿಯೂ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ನಿರ್ವಹಿಸಿದ್ದ ಅವರು, ಈ ಬಾರಿ ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯನ್ನು ನಿರೀಕ್ಷಿಸಿದ್ದರು.

"ನಾನೂ ರಾಮಲಿಂಗಾ ರೆಡ್ಡಿಯವರಂತೆ ಎಂಟು ಬಾರಿ ಗೆದ್ದಿದ್ದೇನೆ. ಹಿರಿಯತೆಗೆ ಗೌರವ ನೀಡಬೇಕು. ಇಲ್ಲದಿದ್ದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಯಾಗಬಹುದು" ಎಂದು ಎಚ್ಚರಿಸಿದ್ದರು.

ಆರಂಭದಲ್ಲಿ ತಮ್ಮ ಖಾತೆಯ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ ಮುನಿಯಪ್ಪ, ಬಳಿಕ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ತಮ್ಮ ನಿಲುವು ಬದಲಿಸಿಕೊಂಡರು. "ಪಕ್ಷ ಏನೇ ಜವಾಬ್ದಾರಿ ನೀಡಿದರೂ ಸಂತೋಷದಿಂದ ಸ್ವೀಕರಿಸುತ್ತೇನೆ" ಎಂದು ತಿಳಿಸಿದರು.

KH Muniyappa
ಖಾತೆ ಹಂಚಿಕೆ ಕಿತ್ತಾಟ: ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ..!

ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿದ್ದೆ. ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಐ ಆ್ಯಮ್ ಹ್ಯಾಪಿ ಎಂದು ಸಂತಸ ವ್ಯಕ್ತಪಡಿಸಿದರು.

ಮುನಿಯಪ್ಪ ಅವರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಆದರೆ, ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ವಿಚಾರ ಪಕ್ಷಕ್ಕೆ ಇನ್ನೂ ತಲೆನೋವಾಗಿಯೇ ಉಳಿದಿದೆ ಎನ್ನಲಾಗುತ್ತಿದೆ.

ಹೊಸ ಕಾಂಗ್ರೆಸ್ ಸರ್ಕಾರ ಆರಂಭದಲ್ಲೇ ಸಚಿವ ಖಾತೆ ಹಂಚಿಕೆ ವಿಚಾರವಾಗಿ ಉಂಟಾಗಿರುವ ಅಸಮಾಧಾನ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

ಇನ್ನೂ ಹಲವು ಸಚಿವರ ನೇಮಕ ಬಾಕಿಯಿರುವ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಈ ಭಿನ್ನಾಭಿಪ್ರಾಯವನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಎಲ್ಲರ ಗಮನ ಸೆಳೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com