

ತುಮಕೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವೇಳೆ ದಲಿತ ಸಿಎಂ ಕೋಟಾದಡಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸಿಎಂ ಬದಲಾವಣೆ ಮಾಡುವುದಾದರೆ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಹೇಳಿದ್ದರು ಎನ್ನಲಾಗಿದೆ.
ಮುಖ್ಯಮಂತ್ರಿ ಸ್ಥಾನದ ಪ್ರಬಲ ಅಕಾಂಕ್ಷಿಯಾಗಿದ್ದ ಕಾಂಗ್ರೆಸ್ನ ನಿಷ್ಠಾವಂತ ಹಿರಿಯ ನಾಯಕ ಜಿ ಪರಮೇಶ್ವರ ಅವರಿಗೆ ಸತತ ಪ್ರಯತ್ನದ ಹೊರತಾಗಿಯೂ ಈ ಬಾರಿಯೂ ಸಿಎಂ ಸ್ಥಾನ ಕೈ ತಪ್ಪಿದೆ. ಇದರೊಂದಿಗೆ ತಮಗೆ ಮೂರು ಬಾರಿ ಸಿಎಂ ಸ್ಥಾನ ಕೈತಪ್ಪಿತು ಎಂದು ಪರಮೇಶ್ವರ ಅವರು ಬೇಸರ ಹೊರ ಹಾಕುವುದ ಜೊತೆ ಆಪ್ತರ ಎದುರು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಪರಮೇಶ್ವರ ಅವರ ಅಸಮಾಧಾನ ಬಹಿರಂಗವಾಗಿಯೇ ಸ್ಫೋಟಗೊಂಡಿದೆ. 2013ರಲ್ಲಿ ಚುನಾವಣೆಯಲ್ಲಿ ಸೋತಿದ್ದರಿಂದ ಮುಖ್ಯಮಂತ್ರಿ ಹುದ್ದೆ ಕೈತಪ್ಪಿತು. ನಾನು ಗೆದ್ದಿದ್ದರೆ ಅಂದು ಸಿದ್ದರಾಮಯ್ಯ ಅವರು ಸಿಎಂ ಆಗುತ್ತಿರಲಿಲ್ಲ ಎಂದು ಪರಮೇಶ್ವರ ಅವರು ಹೇಳಿದ್ದಾರೆ.
ಇನ್ನು 2018ರಲ್ಲಿ ಕಾಂಗ್ರೆಸ್ 80 ಸ್ಥಾನ ಗೆದ್ದರೂ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಸಿಎಂ ಆದರು. ಅವತ್ತು ನನ್ನನ್ನೂ ಮುಖ್ಯಮಂತ್ರಿ ಮಾಡಬಹುದಿತ್ತು. ಆದರೆ ಅವಕಾಶ ಸಿಗಲಿಲ್ಲ. 2026ರಲ್ಲೂ ಸಿಎಂ ಹುದ್ದೆ ನಿರೀಕ್ಷೆ ಇತ್ತು. ಆದ್ರೆ ರಾಜಕೀಯ ಕಾರಣಗಳಿಂದ ಸಾಧ್ಯವಾಗಲಿಲ್ಲ ಎಂದು ಡಿಸಿಎಂ ಪರಮೇಶ್ವರ್ ಅವರು ಬೇಸರ ಹೊರಹಾಕಿದ್ದಾರೆ.
ಸಿಎಂ ಸ್ಥಾಗ ಸಿಗದಿದ್ದರಿಂದ ಒಂದು ಹಂತದಲ್ಲಿ ರಾಜಕೀಯದಿಂದಲೇ ಹಿಂದೆ ಸರಿಯುತ್ತೇನೆ ಎಂದು ಹೈಕಮಾಂಡ್‌ಗೆ ಪರಮೇಶ್ವರ ಅವರು ತಿಳಿಸಿದ್ದರು ಎನ್ನಲಾಗಿದೆ. ಪಕ್ಷ ಬಿಟ್ಟು ಹೋಗುವ ಮನಸ್ಥಿತಿ ಬಂದ್ರೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಮುಂದುವರಿದಿದ್ದೇನೆ. ಕೊನೆಗೆ ಪಕ್ಷ ಕೊಟ್ಟ ಉಪಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ಹೊತ್ತಿದ್ದೇನೆ ಎಂದು ಪರಮೇಶ್ವರ ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಭಾವುಕರಾದ ಪರಮೇಶ್ವರ
ಸಿದ್ದಾರ್ಥ ಕಾಲೇಜಿನ ಸಿಬ್ಬಂದಿ ವರ್ಗದ ಜೊತೆ ಮಾತನಾಡುವಾಗ ಪರಮೇಶ್ವರ ಅವರು ಭಾವುಕರಾದ ಘಟನೆ ನಡೆದಿದೆ. ರಾಜಕಾರಣಕ್ಕೆ ಹೋಗುವಂತಹ ಕಲ್ಪನೆ ಕೂಡ ಇರಲಿಲ್ಲ. ಎಲ್ಲಾ ಆಕಸ್ಮಿಕವಾಗಿ ಆಯ್ತು. ರಾಜೀವ್ ಗಾಂಧಿಯವರು ಪ್ರಧಾನಿ ಆಗಿ ನಮ್ಮ ಕ್ಯಾಂಪಸ್ಗೆ ಬಂದ್ರು. ಅವರ ಸಂಪರ್ಕ ಬಂತು ಕಡೆಗೆ ಹೋಗಿ ಪಕ್ಷ ಸೇರಿಕೊಂಡೆ. ಇವತ್ತಿಗೆ 40 ವರ್ಷ ಆಗ್ತಾ ಬಂತು. ಕೆಲಸ ಮಾಡಿದ್ದೇನೆ. ನನಗೆ ಎಲ್ಲಾ ಹುದ್ದೆನೂ ಕೊಟ್ಟಿದ್ದಾರೆ, ಅಧ್ಯಕ್ಷ ಸ್ಥಾನದಿಂದ ಹಿಡಿದು ಡಿಸಿಎಂವರೆಗೂ. ಆದ್ರೆ ಸಿಎಂ ಸ್ಥಾನ ಕೊಟ್ಟಿಲ್ಲ ಎಂದು ಪರಂ ಭಾವುಕರಾದರು.
Advertisement