

ಗದಗ: ಕಾಂಗ್ರೆಸ್ ಪಕ್ಷವನ್ನು ವಿದೇಶಿಗರು ಸ್ಥಾಪಿಸಿದ್ದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ (ಆರ್‌ಎಸ್‌ಎಸ್) ಅನ್ನು ಭಾರತೀಯರು ಸ್ಥಾಪಿಸಿದ್ದಾರೆ. ಆರ್‌ಎಸ್‌ಎಸ್‌ಗೆ ಮಾನ್ಯತೆ ನೀಡುವ ಪ್ರಶ್ನೆಯೂ ಇಲ್ಲ, ಅಗತ್ಯವೂ ಇಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಗದಗದ ವೀರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದಲ್ಲಿ ನೋಂದಾಯಿತ ಮತ್ತು ನೋಂದಣಿಯಾಗದ ಅನೇಕ ಸಂಘಟನೆಗಳಿವೆ. ಆರ್‌ಎಸ್‌ಎಸ್‌ಗೆ ಸುದೀರ್ಘ ಇತಿಹಾಸವಿದ್ದು, ಇದು ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಘಟನೆಗಳಲ್ಲಿ ಒಂದಾಗಿದೆ. ಸಮಾಜ ಸೇವೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ಕಾರಣವೇ ಕೆಲವರು ಈ ಸಂಘಟನೆಯನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಿದ್ದಾರೆ" ಎಂದು ಹೇಳಿದರು.
"ನಮ್ಮ ರಾಜಕೀಯ ಸಿದ್ಧಾಂತಗಳು, ಮೌಲ್ಯಗಳು ಮತ್ತು ವಿಚಾರಧಾರೆಗಳು ಆರ್‌ಎಸ್‌ಎಸ್ ಮಾರ್ಗದರ್ಶನದಲ್ಲಿಯೇ ರೂಪುಗೊಂಡಿವೆ. ಆದ್ದರಿಂದ ಆರ್‌ಎಸ್‌ಎಸ್‌ಗೆ ಪ್ರತ್ಯೇಕ ಮಾನ್ಯತೆ ಬೇಕೆಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿರಂತರ 4,399 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಐತಿಹಾಸಿಕ ಮೈಲುಗಲ್ಲು ತಲುಪಿರುವ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು ಎಂದು ಹೇಳಿದರು.
"ಪ್ರಸ್ತುತ ಜಗತ್ತು ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಅಸ್ಥಿರ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಭಾರತವನ್ನು ಮುನ್ನಡೆಸುವ ಶಕ್ತಿ ನರೇಂದ್ರ ಮೋದಿ ಅವರಲ್ಲಿದೆ. ಕಳೆದ ಮೂರು-ನಾಲ್ಕು ತಿಂಗಳುಗಳಲ್ಲಿ ಅವರು ಅದನ್ನು ಸಾಬೀತುಪಡಿಸಿದ್ದಾರೆ.
2047ರ ವೇಳೆಗೆ ಭಾರತವನ್ನು ಆತ್ಮನಿರ್ಭರ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸಲು ಮೋದಿ ಅವರ ನಾಯಕತ್ವ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ. ಸಿ. ಪಾಟೀಲ್, ವಿಧಾನ ಪರಿಷತ್ ಸದಸ್ಯಎಸ್. ವಿ. ಸಂಕನೂರು, ಭರತ್ ಬೊಮ್ಮಾಯಿ, ರಾಜು ಕುರುಡಗಿ, ಲಿಂಗರಾಜ ಪಾಟೀಲ್, ಅನಿಲ್ ಅಬ್ಬಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Advertisement