

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಕೆಲವು ಸಚಿವರು ತಮಗೆ ಹಂಚಿಕೆಯಾದ ಖಾತೆ ಬಗ್ಗೆ ಖ್ಯಾತೆ ತೆಗೆದಿದ್ದಾರೆ. ಇನ್ನು ಎರಡನೇ ಹಂತದ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿದಿದೆ. ಸಚಿವಾಕಾಂಕ್ಷಿಗಳು ಮಂತ್ರಿಗಿರಿಗಾಗಿ ಲಾಬಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ದೆಹಲಿಯಲ್ಲಿದ್ದಾರೆ.
ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ರಾಮಲಿಂಗಾರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದಕ್ಕೆ ರಾಜೀನಾಮೆ ನೀಡಿ, ಮನವೊಲಿಕೆ ಬಳಿಕ ರಾಜೀನಾಮೆ ವಾಪಾಸ್ ಪಡೆದುಕೊಂಡಿದ್ದಾರೆ. ಕೆ.ಹೆಚ್.ಮುನಿಯಪ್ಪ ಕೃಷಿ ಹಾಗೂ ಸಹಕಾರಿ ಖಾತೆಗೆ ಪಟ್ಟು ಹಿಡಿದಿದ್ದಾರೆ. ಕೃಷ್ಣ ಬೈರೇಗೌಡ ನಗರಾಭಿವೃದ್ಧಿಯಲ್ಲಿ ಬಿಡಿಎ ಇಲ್ಲದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವರಾಗಿರುವ ಸತೀಶ್ ಜಾರಕಿಹೊಳಿ ತಾನು ಹೆಚ್ಚುವರಿಯಾಗಿ ಕ್ರೀಡಾ ಖಾತೆಯನ್ನು ಕೇಳಿದ್ದೆ ಎಂದಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಜೊತೆಗೆ ಕ್ರೀಡಾ ಇಲಾಖೆ ಕೇಳಿದ್ದೆ. ಕ್ರೀಡಾ ಇಲಾಖೆ ಕೊಟ್ಟಿದ್ದರೆ ಕ್ರಾಂತಿ ಮಾಡುತ್ತಿದ್ದೆ. ಆದರೆ ಡಿಸಿಎಂ ಪರಮೇಶ್ವರ್ ಅವರು ಈ ಖಾತೆಯನ್ನು ಕೇಳಿರಬಹುದು. ಹಾಗಾಗಿ ಅವರಿಗೆ ಕೊಟ್ಟಿದ್ದಾರೆ ಎಂದರು.
ನಾನು ಹೆಚ್ಚುವರಿಯಾಗಿ ಕ್ರೀಡಾ ಖಾತೆ ಕೇಳಿದ್ದೆ. ಬಹುಶಃ ಪರಮೇಶ್ವರ್ ಕೇಳಿ ತೆಗೆದುಕೊಂಡಿರಬಹುದು. ನನಗೆ ಕ್ರೀಡಾ ಖಾತೆ ಇಷ್ಟ ಇತ್ತು. ನಾನು ಪ್ರತಿ ವರ್ಷ 50 ಲಕ್ಷ ಖರ್ಚು ಮಾಡಿ ಸ್ಪೋರ್ಟ್ಸ್ ನಡೆಸುತ್ತೇನೆ. ಹಾಗಾಗಿ ಸ್ಪೋರ್ಟ್ಸ್ ಕೊಟ್ಟಿದ್ದರೆ ಕ್ರಾಂತಿ ಮಾಡುತ್ತಿದ್ದೆವು. ಕ್ರೀಡೆಯಲ್ಲಿ ರಾಜ್ಯ ನಂಬರ್ ವನ್ ಮಾಡುತ್ತಿದ್ದೇವೆ. ಹಿಂದೆಯೂ ಕ್ರೀಡಾ ಖಾತೆ ಕೇಳಿದ್ದೆವು, ಧರ್ಮಸಿಂಗ್ ಅವಧಿಯಲ್ಲಿ ಕೇಳಿದ್ದೆವು. ಈಗ ಪರಮೇಶ್ವರ್ ಅವರಿಗೆ ಕೊಟ್ಟಿದ್ದಾರೆ. ಅವರಿಗೆ ಕ್ರೀಡೆ ಬಗ್ಗೆ ಒಲವಿದೆ, ಅದಕ್ಕೆ ಕೇಳಿ ಪಡೆದಿರಬಹುದು ಎಂದರು.
ಸಿದ್ದರಾಮಯ್ಯ ಜೊತೆ ಭಿನ್ನಾಭಿಪ್ರಾಯವಿಲ್ಲ
ನನ್ನ, ಸಿದ್ದರಾಮಯ್ಯ ನಡುವಿನ ಸಂಬಂಧದ ಬಗ್ಗೆ ಚರ್ಚೆ ಅನವಶ್ಯಕ. ಅವರ, ನನ್ನ ಸಂಬಂಧ ಹಾಳಾಗಿಲ್ಲ ಎಂದರು. ಮೊದಲಿನಿಂದಲೂ ನಾನೂ ಹೇಳಿದ್ದೇನೆ. ನಮ್ಮ ನಡುವೆ ಗೊಂದಲವೇ ಇಲ್ಲ. ಕೆಲವು ಐಟಿ ಸೆಲ್‌ನವರು ಸ್ವಲ್ಪ ಹೆಚ್ಚಿನ ಪ್ರಚಾರ ಮಾಡಿದರು. ನಮಗೆ ಗೊತ್ತಿರುವ ಐಟಿ ಸೆಲ್‌ನವರೇ ಹೆಚ್ಚಿನ ಪ್ರಚಾರ ಕೊಟ್ಟರು. ಅನವಶ್ಯಕ ಚರ್ಚೆ ಆಗಿದೆ. ಅದರ ಬಗ್ಗೆ ಅಹಿಂದ ಸಂಘಟನೆ ಇದ್ದೇ ಇರುತ್ತದೆ. ಪಕ್ಷವನ್ನು ಹೊರತುಪಡಿಸಿಯೂ ಸಂಘಟನೆ ಕೆಲಸ ಇದ್ದೇ ಇರುತ್ತದೆ. ಅಹಿಂದ ಸಂಘಟನೆ ಬಲಪಡಿಸಲು ಕೆಲಸ ಮಾಡುತ್ತೇನೆ ಎಂದರು.
Advertisement