

ಬೆಂಗಳೂರು: ವಿಜಯೇಂದ್ರ ಅವರೇ ದೆಹಲಿಗೆ ಹೋಗ್ಬೇಡಿ, ಹೋದ್ರೆ ಬಿಜೆಪಿ ಹೈಕಮಾಂಡ್ ನಿಮ್ಮ ರಾಜೀನಾಮೆ ಕೇಳುತ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡ ಮತದಾನದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ವಿಜಯೇಂದ್ರ ಅವರೇ ದೆಹಲಿಗೆ ಹೋಗ್ಬೇಡಿ, ದೆಹಲಿಗೆ ಹೋದರೆ ಹೈಕಮಾಂಡ್ ರಾಜೀನಾಮೆ ಕೇಳಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಎಚ್ಚರಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರ ಹಾಗೂ ಆರ್ ಅಶೋಕ್ ನಾಯಕತ್ವದ ವಿರುದ್ಧ ಅವರ ಶಾಸಕರು ಮತ ಹಾಕಿದ್ದಾರೆ. ಪಾಪ ಯತ್ನಾಳ್ ಹೇಳಿದ್ದು ನಿಜ ಆಯಿತು. ಯತ್ನಾಳ್ ಅವರ ಪರ ವೋಟ್ ಹಾಕಿಲ್ಲ ಅಂದ್ರೇ ಇನ್ನೊಂದು ಕಡಿಮೆಯಾಗುತ್ತಿತ್ತು. ಯತ್ನಾಳ್ ಅವರಿಗೆ ಬಿಜೆಪಿಯವರು ಧನ್ಯವಾದ ತಿಳಿಸಬೇಕು ಎಂದರು.
ವಿಜಯೇಂದ್ರರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್ ನೀಡಿದೆಯಂತೆ. ಆದರೆ ವಿಜಯೇಂದ್ರಗೆ ವೈಯಕ್ತಿಕ ಸಲಹೆ ಕೊಡುತ್ತಿದ್ದೇನೆ. ವಿಜಯೇಂದ್ರ ದಯವಿಟ್ಟು ದೆಹಲಿಗೆ ಹೋಗಬೇಡಿ. ವಿಜಯೇಂದ್ರ ದೆಹಲಿಗೆ ಹೋದ್ರೇ ಬಿಜೆಪಿ ಹೈಕಮಾಂಡ್ ನಿಮ್ಮ ರಾಜೀನಾಮೆ ಕೇಳುತ್ತಾರೆ ಎಂದು ಲೇವಡಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಸಿದ್ಧಾಂತ ಒಪ್ಪುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳುವ ಮೂಲಕ ಪ್ರಿಯಾಂಕ್ ಖರ್ಗೆ ಅವರು ದೋಸ್ತಿ ಪಾಳಯದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದ್ದಾರೆ.
ಇನ್ನು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರವಾಗಿ ಮಾತನಾಡಿ ಖರ್ಗೆ ಅವರು, ಸರ್ಕಾರದ ಗ್ಯಾರಂಟಿ ಪರಿಷ್ಕರಣೆ ಕಾರ್ಯ ಸರಿಯಾಗಿದೆ. ಸರ್ಕಾರದ ಉದ್ದೇಶ ಯೋಜನೆಯ ಲಾಭ ಅರ್ಹ ಪಲಾನುಭವಿಗಳಿಗೆ ಸಿಗಬೇಕು. ಸರ್ಕಾರದ ಸವಲತ್ತು ಅನರ್ಹರು, ಬೇರೆ ರಾಜ್ಯದವರು, ಬೇರೆ ಬೇರೆ ಖಾತೆಗೆ ಹೋಗುತ್ತಿದೆ. ಅದನ್ನ ತಪ್ಪಿಸಬೇಕಿದೆ. ಅರ್ಹ ಫಲಾನುಭವಿಗಳಿಗಷ್ಟೇ ಗ್ಯಾರಂಟಿ ಹೋಗಬೇಕಿದೆ. ಪರಿಷ್ಕರಣೆಯಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಸಿಎಂ ಜನ ಸ್ಪಂದನ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಆಡಳಿತವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವ ಕೆಲಸ ಸಿಎಂ ಮಾಡುತ್ತಿದ್ದಾರೆ. ಜನ ಸಿಎಂ ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ ಬರೋದು ಬೇಡ. ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಆಡಳಿತ ಸುಧಾರಣೆಗೆ ಸಿಎಂ ಈ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ನುಡಿದರು.
Advertisement