Cross voting ವಿವಾದ: BJP ಹೈಕಮಾಂಡ್‌ಗೆ ರಾಜ್ಯ ನಾಯಕರ ವರದಿ; ದ್ರೋಹ ಬಗೆದವರ ವಿರುದ್ಧ ಶಿಸ್ತು ಕ್ರಮಕ್ಕೆ ನಿತಿನ್ ನಬಿನ್ ಸೂಚನೆ? Video

ಚುನಾವಣೆಯಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಎರಡು ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಕಾಂಗ್ರೆಸ್‌ಗೆ ನಿರೀಕ್ಷೆಗಿಂತ 11 ಮತಗಳು ಹೆಚ್ಚಾಗಿ ದೊರೆತಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಅಡ್ಡ ಮತದಾನ ಬಹಿರಂಗಗೊಂಡಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಕ್ರಾಸ್‌ ವೋಟಿಂಗ್‌ ಪ್ರಕರಣ ಇದೀಗ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ನೀಡಿದ್ದಾರೆಂದು ತಿಳಿದುಬಂದಿದೆ.

ಜೂನ್ 18ರಂದು ನಡೆದಿದ್ದ ಏಳು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಂದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಡ್ಡ ಮತದಾನ ನಡೆದಿರುವ ಆರೋಪಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನಸಭೆ ಮುಖ್ಯ ಸಚೇತಕ ದೊಡ್ಡನಗೌಡ ಎಚ್. ಪಾಟೀಲ್ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ನೇತೃತ್ವದ ನಿಯೋಗವು ಮಂಗಳವಾರ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿತು.

ಸುಮಾರು 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಕ್ರಾಸ್‌ ವೋಟಿಂಗ್‌ ಕುರಿತ ಮಾಹಿತಿ ಮತ್ತು ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಚುನಾವಣೆಯಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಎರಡು ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಕಾಂಗ್ರೆಸ್‌ಗೆ ನಿರೀಕ್ಷೆಗಿಂತ 11 ಮತಗಳು ಹೆಚ್ಚಾಗಿ ದೊರೆತಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಅಡ್ಡ ಮತದಾನ ಬಹಿರಂಗಗೊಂಡಿದೆ.

ಸಭೆಯ ಬಳಿಕ ಮಾತನಾಡಿದ ವಿಜಯೇಂದ್ರ ಅವರು, "ಕ್ರಾಸ್‌ ವೋಟಿಂಗ್‌ ವಿಚಾರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಪಕ್ಷಕ್ಕೆ ಅನ್ಯಾಯ ಹಾಗೂ ದ್ರೋಹ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಅಧ್ಯಕ್ಷರು ಭರವಸೆ ನೀಡಿದ್ದಾರೆ. ಜೊತೆಗೆ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸಿ, ಒಗ್ಗಟ್ಟಿನಿಂದ ಕೆಲಸ ಮಾಡಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಂತೆ ಸಲಹೆ ನೀಡಿದ್ದಾರೆ" ಎಂದು ಹೇಳಿದರು.

File photo
MLC ಚುನಾವಣೆ ಅಡ್ಡ ಮತದಾನ: ಪಕ್ಷ ದ್ರೋಹಿಗಳ ವಿರುದ್ಧ ಈಗಾಗಲೇ ಕ್ರಮ ಆರಂಭಿಸಲಾಗಿದೆ- ಆರ್ ಅಶೋಕ್; Video

ಆರ್. ಅಶೋಕ್ ಮಾತನಾಡಿ, "ರಾಜ್ಯ ನಿಯೋಗ ಭೇಟಿ ನೀಡುವ ಮುನ್ನವೇ ರಾಷ್ಟ್ರೀಯ ಅಧ್ಯಕ್ಷರು ಕ್ರಾಸ್‌ ವೋಟಿಂಗ್‌ ಕುರಿತ ಮಾಹಿತಿ ಸಂಗ್ರಹಿಸಿದ್ದರು. ನಾವು ನೀಡಿದ ಮಾಹಿತಿಯ ಆಧಾರದಲ್ಲಿ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ" ಎಂದರು.

ಕ್ರಾಸ್‌ ವೋಟಿಂಗ್‌ ನಡೆಸಿದ ಶಂಕೆಯಲ್ಲಿರುವ 3 ರಿಂದ 4 ಬಿಜೆಪಿ ಶಾಸಕರ ಪಟ್ಟಿಯನ್ನೂ ನಾಯಕರು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಅಲ್ಲದೆ 2024ರ ಲೋಕಸಭಾ ಚುನಾವಣೆಯಲ್ಲೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಕೆಲ ಶಾಸಕರ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಚುನಾವಣೆಗೆ ಮುನ್ನವೇ ಅಡ್ಡ ಮತದಾನದ ಮಾಹಿತಿ ತಿಳಿದಿತ್ತು ಎಂದು ಹೇಳಿರುವ ವಿಚಾರವನ್ನೂ ಹೈಕಮಾಂಡ್ ಗಮನಕ್ಕೆ ತೆಗೆದುಕೊಂಡಿದೆ ಎನ್ನಲಾಗಿದೆ.

ಕೆಲವು ಬಿಜೆಪಿ ಶಾಸಕರು ಚುನಾವಣೆಗೂ ಮುನ್ನ ಬೆಂಗಳೂರಿನ ಹೋಟೆಲ್‌ನಲ್ಲಿ ಸಭೆ ನಡೆಸಿದ್ದರು ಎಂಬ ಹೇಳಿಕೆ ಕೂಡ ಚರ್ಚೆಗೆ ಬಂದಿದೆ.

ಕ್ರಾಸ್‌ ವೋಟಿಂಗ್‌ ತನಿಖೆಗಾಗಿ ಬಿಜೆಪಿ ಈಗಾಗಲೇ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಸಮಿತಿ ಶೀಘ್ರದಲ್ಲೇ ತನ್ನ ವರದಿಯನ್ನು ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಸಲ್ಲಿಸಲಿದೆ.

ಈ ನಡುವೆೆ ಕ್ರಾಸ್‌ ವೋಟಿಂಗ್‌ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, "ಬಿಜೆಪಿ ಟಿಕೆಟ್‌ನಲ್ಲಿ ಗೆದ್ದು ಪಕ್ಷಕ್ಕೇ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ಇಬ್ಬರು ಶಾಸಕರು (ಎಸ್‌.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್) ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಹಿರಂಗವಾಗಿ ಮತ ಹಾಕಿದ್ದಾರೆ. ಆದರೂ ಯಾವುದೇ ಪಶ್ಚಾತ್ತಾಪವಿಲ್ಲದೆ ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ಸ್ವಾಭಿಮಾನ ಇದ್ದರೆ ಪಕ್ಷವನ್ನು ತೊರೆಯಬೇಕು ಅಥವಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ವಾಗ್ದಾಳಿ ನಡೆಸಿದರು.

ಇನ್ನೊಂದೆಡೆ, ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಯೋಜನೆಗೂ ಹೈಕಮಾಂಡ್ ಬ್ರೇಕ್ ಹಾಕಿದೆ ಎನ್ನಲಾಗಿದೆ.

ಅಡ್ಡ ಮತದಾನ ಮಾಡಿದವರನ್ನು ಪತ್ತೆಹಚ್ಚಲು ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಶಾಸಕರಿಂದ ಪ್ರಮಾಣ ಮಾಡಿಸುವ ಯೋಚನೆಗೆ ಪಕ್ಷದೊಳಗೇ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಇಂತಹ ಸಭೆ ನಡೆಸದಂತೆ ವಿಜಯೇಂದ್ರ ಅವರಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com