

ಬೆಂಗಳೂರು: ಆರ್‌ಎಸ್‌ಎಸ್‌ನ ನೋಂದಣಿ ಹಾಗೂ ಪಾರದರ್ಶಕತೆ ಕುರಿತು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ್ದ ಪ್ರಶ್ನೆ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಈ ವಿಚಾರಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಟ್ರಸ್ಟ್ ವಿರುದ್ಧ ಭೂ ಅಕ್ರಮದ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಬೆಂಗಳೂರಿನ ಭೇಟಿ ಹಿನ್ನೆಲೆಯಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, “ಭಾಗವತ್ ಅವರು ಬೆಂಗಳೂರಿಗೆ ಬಂದಾಗ ಆರ್‌ಎಸ್‌ಎಸ್ ನೋಂದಣಿಯ ದಾಖಲೆಗಳನ್ನು ಕೂಡ ತರುತ್ತಾರೆಯೇ ಎಂಬುದು ಗೊತ್ತಿಲ್ಲ. ಈ ಬಗ್ಗೆ ನಾನು ಪ್ರಶ್ನೆ ಕೇಳಿದ್ದೇನೆ, ಆದರೆ ಯಾವುದೇ ಉತ್ತರ ಸಿಕ್ಕಿಲ್ಲ” ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, “ಪ್ರಿಯಾಂಕ್ ಖರ್ಗೆ ಮೊದಲು ಆರ್‌ಎಸ್‌ಎಸ್ ಏನು ಎಂಬುದನ್ನು ತಿಳಿದುಕೊಳ್ಳಬೇಕು. 100 ವರ್ಷಗಳ ಇತಿಹಾಸ ಹೊಂದಿರುವ ಸಂಘಟನೆಯಾಗಿದೆ. ಅವರು ಒಂದು ಗಂಟೆಯಾದರೂ ಸಂಘದ ಶಾಖೆಗೆ ಭೇಟಿ ನೀಡಿ ಅದರ ಕಾರ್ಯಚಟುವಟಿಕೆಗಳನ್ನು ನೋಡಲಿ” ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ಕೆಲವರು ಉದ್ದೇಶಪೂರ್ವಕವಾಗಿ ಆರ್‌ಎಸ್‌ಎಸ್ ವಿರುದ್ಧ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರ ನಡುವೆ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಸೇರಿದಂತೆ ಹಲವು ನಾಯಕರು ಖರ್ಗೆ ಕುಟುಂಬದ ವಿರುದ್ಧ ಹೊಸ ಆರೋಪಗಳನ್ನು ಮುಂದಿಟ್ಟಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದ ಇತರ ಸದಸ್ಯರು ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಂಬಂಧ ಹೊಂದಿದ್ದು, ರಾಜಕೀಯ ಪ್ರಭಾವ ಬಳಸಿ ಸರ್ಕಾರಿ ಜಾಗ ಸೇರಿದಂತೆ ಹಲವು ಆಸ್ತಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಡವರಿಗೆ ಸೇರಿದ್ದ ಆಸ್ತಿಗಳನ್ನು ಟ್ರಸ್ಟ್ ಮೂಲಕ ಕಬಳಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಬಿಜೆಪಿ ನಾಯಕರು ಮಾಡಿದ್ದಾರೆ.
ಆದರೆ, ಈ ಆರೋಪಗಳನ್ನು ಪ್ರಿಯಾಂಕ್ ಖರ್ಗೆ ತಳ್ಳಿಹಾಕಿದ್ದಾರೆ. “ಎಲ್ಲ ಆಸ್ತಿ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಿವೆ. ಯಾವುದೇ ವೇದಿಕೆಯಲ್ಲಿ ಚರ್ಚೆಗೆ ನಾನು ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಆರ್‌ಎಸ್‌ಎಸ್ ಅನ್ನು ಮೆಚ್ಚಿಸಲು ಹರಸಾಹಸ ಪಡುತ್ತಿದೆ. ಅಯೋಧ್ಯೆಯ ರಾಮಮಂದಿರದ ಲೆಕ್ಕಪತ್ರಗಳ ಬಗ್ಗೆ ಜನರು ಪ್ರಶ್ನಿಸುತ್ತಿರುವಾಗ, ಬಿಜೆಪಿ ಮಾತ್ರ ಕಲಬುರಗಿಯ ಬುದ್ಧ ವಿಹಾರ ಮತ್ತು ಅದರ ಟ್ರಸ್ಟ್‌ಗಳ ಬಗ್ಗೆ ಆರೋಪಗಳನ್ನು ಮುಂದಿಟ್ಟುಕೊಂಡಿದೆ ಎಂದು ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಐದು ಬಿಜೆಪಿ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರಕ್ಕೆ 12 ವರ್ಷಗಳಾಗಿದೆ. ನಿಜವಾಗಿಯೂ ಯಾವುದೇ ಅಕ್ರಮ ನಡೆದಿದ್ದರೆ ನನ್ನ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ನಾನು ಇನ್ನೂ ಜೈಲಿನಲ್ಲಿ ಇಲ್ಲದೇ ಹೊರಗೆ ಹೇಗೆ ಓಡಾಡುತ್ತಿದ್ದೇನೆ?” ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಆರ್‌ಎಸ್‌ಎಸ್ ಅನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ, “ನಮ್ಮ ದಾಖಲೆಗಳನ್ನು ಕೇಳುವವರು ಮೊದಲು ತಮ್ಮ ದಾಖಲೆಗಳನ್ನು ತೋರಿಸಲಿ. ಆರ್‌ಎಸ್‌ಎಸ್ ತನ್ನ ನೋಂದಣಿ, ಹಣಕಾಸು ವ್ಯವಹಾರಗಳು ಮತ್ತು ಲೆಕ್ಕಪತ್ರಗಳನ್ನು ಯಾವಾಗ ಬಹಿರಂಗಪಡಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಈ ವಿಚಾರದಲ್ಲಿ ಈಗಾಗಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಸಂಸ್ಥೆಯ ಪಾರದರ್ಶಕತೆ ಕುರಿತು ಉತ್ತರ ಕೇಳಿರುವುದಾಗಿ ತಿಳಿಸಿದ್ದಾರೆ.
ಈ ರಾಜಕೀಯ ವಾಕ್ಸಮರದ ನಡುವೆ ಬಿಜೆಪಿ ಪಕ್ಷದ ಹಿರಿಯ ಸಂಸದರೊಬ್ಬರ ಧ್ವನಿ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೊಸ ಚರ್ಚೆಗೆ ಕಾರಣವಾಗಿದೆ.
ವಿಡಿಯೊದಲ್ಲಿ ಆರ್‌ಎಸ್‌ಎಸ್‌ನ್ನು “ಅಪಾಯಕಾರಿ ಸಂಘಟನೆ” ಎಂದು ಉಲ್ಲೇಖಿಸಿರುವ ಧ್ವನಿ ಕೇಳಿಬಂದಿದ್ದು, ಸಂಘಟನೆಯನ್ನು ಪ್ರಶ್ನಿಸುವವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂಬ ಮಾತುಗಳೂ ದಾಖಲಾಗಿವೆ ಎಂದು ಹೇಳಲಾಗಿದೆ.
ಆರ್‌ಎಸ್‌ಎಸ್ ನೋಂದಣಿ ವಿಚಾರವಾಗಿ ಆರಂಭವಾದ ಈ ಚರ್ಚೆ ಇದೀಗ ಖರ್ಗೆ ಕುಟುಂಬ, ಟ್ರಸ್ಟ್ ಆಸ್ತಿ ವಿವಾದ ಮತ್ತು ಬಿಜೆಪಿ-ಕಾಂಗ್ರೆಸ್ ನಡುವಿನ ತೀವ್ರ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ.