

ರಾಮನಗರ: ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಜನಾಭಿಪ್ರಾಯದ ವಿರುದ್ಧವಾಗಿ ಹೋಗಬೇಡಿ ಎಂದು ನಾನು ರಾಜ್ಯ ಸರ್ಕಾರವನ್ನು ವಿಶೇಷವಾಗಿ ಮುಖ್ಯಮಂತ್ರಿಗಳನ್ನು ಕೇಳಿಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರದಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಬಿಡದಿ ಟೌನ್ ಶಿಪ್ ವಿಚಾರವನ್ನು ವೈಯಕ್ತಿಕ ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಂಡಿಲ್ಲ. 2007ನೇ ಇಸವಿ ಜುಲೈ 30-31 ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಏನೇನು ಮಾತನಾಡಿದರು ಅದಕ್ಕೆ ನಾನು ಅಸೆಂಬ್ಲಿಯಲ್ಲಿ ಏನು ಉತ್ತರ ಕೊಟ್ಟಿದ್ದೇನೆ ಎಂಬುದು ದಾಖಲಾಗಿದೆ ಎಂದರು.
ಅವತ್ತು ಕಾಂಗ್ರೆಸ್ ನಾಯಕರೆಲ್ಲರೂ ವಿರೋಧ ಮಾಡಿದ ಹಿನ್ನೆಲೆಯಲ್ಲಿ ಬಿಡದಿ ಟೌನ್ ಶಿಪ್ ವಿಚಾರ ಬಗ್ಗೆ ನಿರಾಸಕ್ತನಾಗಿ ನನ್ನ ನಿರ್ಧಾರದಿಂದ ಹಿಂದೆ ಸರಿದೆ. ಅಲ್ಲಿಗೆ ಆ ವಿಚಾರ ನಿಂತು ಹೋಗಿತ್ತು. ಇವತ್ತು 2025ರಿಂದ ಹೊಸ ರೂಪ ಕೊಡುತ್ತೇನೆ ಎಂದು ಹೊರಟಿದ್ದಾರೆ. ಅಲ್ಲಿ 100ಕ್ಕೆ 80 ಭಾಗ ರೈತರ ವಿರೋಧ ಇದೆ. ರೈತರ ವಿರೋಧ ಇದ್ದಾಗ ಟೌನ್ ಶಿಪ್ ಯೋಜನೆ ಏಕೆ ಮುಂದುವರಿಸುತ್ತೀರಿ ಎಂದು ಕುಮಾರಸ್ವಾಮಿ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಸರ್ಕಾರ ತರಾತುರಿಯಲ್ಲಿ 18 ಕೋಟಿ 40 ಮಂದಿಗೆ ಕೊಟ್ಟಿದ್ದೇವೆ ಎನ್ನುತ್ತಾರೆ. ಡಿನೋಟಿಫಿಕೇಷನ್ ನಲ್ಲಿ ಅರ್ಜಿ ಕೊಟ್ಟಿರುವುದು ಸುಮಾರು 700 ರೈತರಿಗೆ. ಅಷ್ಟು ಜನಕ್ಕೆ ಹಿಂಸೆ ಕೊಟ್ಟು ಪುಡಾರಿಗಳನ್ನು ಬಿಟ್ಟುಕೊಂಡು ಯಾರನ್ನೋ ಕರೆದುಕೊಂಡು ಬಂದು ಹಣ ಕೊಟ್ಟು ರೈತರನ್ನು ಒತ್ತಾಯಪೂರ್ವಕವಾಗಿ ಮನವೊಲಿಸುತ್ತಿದ್ದಾರೆ. ಅಲ್ಲಿನ ಜನರ ನಿಜವಾದ ಅಭಿಪ್ರಾಯವನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು.
ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ರಸ್ತೆಗಳು ಹೊಂಡ-ಗುಂಡಿ ಎದ್ದು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅದನ್ನು ಸರಿಪಡಿಸಲು ಸಾಧ್ಯವಾಗದವರು ಬಿಡದಿ ಟೌನ್ ಶಿಪ್ ಮಾಡ್ತಾರಂತೆ ಎಂದು ವ್ಯಂಗ್ಯವಾಡಿದರು.
ಇಂದು ಭೈರಮಂಗಲಕ್ಕೆ ಕುಮಾರಸ್ವಾಮಿ ಭೇಟಿ
ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಸಂತ್ರಸ್ತ ರೈತರ ಸಮ್ಮುಖದಲ್ಲಿ ಚರ್ಚಿಸಲು ಜೂನ್ 27ರಂದು ಭೈರಮಂಗಲದಲ್ಲಿ ಮುಖ್ಯಮಂತ್ರಿಗಳಿಗಾಗಿ ಕಾಯುವುದಾಗಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದು ಅದರಂತೆ ಇಂದು ಭೈರಮಂಗಲಕ್ಕೆ ಹೋಗುತ್ತಿದ್ದಾರೆ. ಅಲ್ಲಿ ಡಿ ಕೆ ಶಿವಕುಮಾರ್ ಮತ್ತು ಹೆಚ್ ಡಿ ಕುಮಾಸ್ವಾಮಿ ಮುಖಾಮುಖಿಯಾಗುತ್ತಾರಾ ಎಂಬ ಕುತೂಹಲ ಉಂಟಾಗಿದೆ.
ನಾನು ಇಂದು ಮಧ್ಯಾಹ್ನ 4 ಗಂಟೆಯವರೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕಾಯುತ್ತೇನೆ, ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಸಿಎಂ ಅಧಿಕೃತ ವೇಳಾಪಟ್ಟಿಯಲ್ಲಿ ಭೈರಮಂಗಲ ಭೇಟಿ ಉಲ್ಲೇಖವಿಲ್ಲ
ಸಿಎಂ ಡಿಕೆ ಶಿವಕುಮಾರ್ ಅವರ ಕಚೇರಿಯಿಂದ ಬಿಡುಗಡೆಯಾಗಿರುವ ಅಧಿಕೃತ ವೇಳಾಪಟ್ಟಿಯಲ್ಲಿ ಇಂದು ಜೂನ್ 27, ಶನಿವಾರ ಭೈರಮಂಗಲ ಭೇಟಿ ಉಲ್ಲೇಖವೇ ಇಲ್ಲ. ಕೆಂಪೇಗೌಡ ಜಯಂತಿ ಕಾರ್ಯಕ್ರಮಗಳು ಹಾಗೂ ಮೇಜರ್ ಆರ್ಟಿಯಲ್ ರಸ್ತೆ ಉದ್ಘಾಟನೆ ಮಾತ್ರ ನಿಗದಿಯಾಗಿದೆ.