

ಬೆಂಗಳೂರು: ಫೋನ್ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಕಾಂಗ್ರೆಸ್ ಸರ್ಕಾರದೊಳಗೆ ಅಪನಂಬಿಕೆ ಮೂಡಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, "ಅವರು ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳ ಮೇಲೆ ಕೆಲವು ಆರೋಪಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ಒಬ್ಬ ಅನುಭವಿ ವ್ಯಕ್ತಿ ಎಂದು ನಾನು ಭಾವಿಸಿದ್ದೆ" ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.
"ನಾನು ಬೀದಿ ಹೋರಾಟಗಾರ; ಬಸ್ ಚಾರ್ಜ್ ಇಲ್ಲದ ದಿನಗಳಿಂದ ಹಿಡಿದು ನಾನು ಈಗ ಇರುವ ಸ್ಥಿತಿಯವರೆಗೆ ಅದು ಹೇಗಿತ್ತು ಎಂದು ನನಗೆ ಗೊತ್ತು. ನಾನು ಯಾವುದಕ್ಕಾಗಿ ಹೋರಾಡಿದ್ದೇನೆ ಮತ್ತು ಯಾವುದಕ್ಕಾಗಿ ಹೋರಾಡಬೇಕೆಂದು ಗೊತ್ತಿದೆ. ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ... ನಾನು ಏನನ್ನೂ ಕೇಳುವ ಅಗತ್ಯವಿಲ್ಲ; ಅದು ನನಗೆ ಸಿಗಬೇಕಾದಾಗ ಸಿಗುತ್ತದೆ" ಎಂದು ನಾಯಕತ್ವ ಬದಲಾವಣೆ ಕುರಿತು ಹೊಸ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದರು.
"ಕೆಲವರು ದಲಿತ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಯಾರು ಏನು ಮಾತನಾಡುತ್ತಿದ್ದಾರೆಂದು ನನಗೆ ತಿಳಿದಿದೆ. ನಾನು ಈಗ ಏನನ್ನೂ ಮಾತನಾಡಲು ಬಯಸುವುದಿಲ್ಲ, ಸಿಎಂ ಸ್ಥಾನ ಖಾಲಿಯಾದ ನಂತರವೇ ಅದನ್ನು ಮಾಡಬಹುದು. ಪಕ್ಷದ ಅಧ್ಯಕ್ಷನಾಗಿ, ನನ್ನಿಂದ ನನ್ನ ಸರ್ಕಾರಕ್ಕೆ ಹಾನಿಯಾಗುವುದು ನನಗೆ ಇಷ್ಟವಿಲ್ಲ... ಪಕ್ಷಕ್ಕೆ ಹಾನಿ ಮಾಡಲು ನಾನು ಬಯಸುವುದಿಲ್ಲ... " ಎಂದು ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿ ಅವರ ಫೋನ್ ಟ್ಯಾಪಿಂಗ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, "175 ಎಂಎಲ್‌ಸಿಗಳು ಮತ್ತು ಶಾಸಕರು ಸಿಎಂ ಅಥವಾ ಪ್ರಧಾನಿಯಾಗುವ ಭರವಸೆ ಹೊಂದಿದ್ದಾರೆ... ಸಿಎಂ ಈಗಾಗಲೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ ಮತ್ತು ಗೃಹ ಸಚಿವರು ಈ ಬಗ್ಗೆ ಮಾತನಾಡುತ್ತಾರೆ" ಎಂದರು.
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಆರು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 10 ರಂದು ಪಕ್ಷದ ಶಾಸಕರು ಮತ್ತು ಎಂಎಲ್‌ಸಿಗಳಿಗೆ ಭೋಜನ ಕೂಟ ಆಯೋಜಿಸಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.
ಇದಕ್ಕೂ ಮೊದಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೋನ್ ಕದ್ದಾಲಿಕೆ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. 'ತಾ ಕಳ್ಳ ಇತರರ ನಂಬ' ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶೆಯ ಹೇಳಿಕೆ ಎಂದು ಸಿಎಂ ಟೀಕಿಸಿದ್ದಾರೆ.
ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ. ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.
Advertisement