

ಬೆಂಗಳೂರು: ನಗರದಲ್ಲಿ ಇ-ಖಾತಾ (e-Khata) ಪ್ರಕ್ರಿಯೆಯ ಸುತ್ತ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿದ್ದು, ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ದಾಖಲೆಗಳನ್ನು ಪ್ರದರ್ಶಿಸಿ, ಮಹಾನಗರ ಪಾಲಿಕೆ ಅಧಿಕಾರಿಗಳು ಡಿಜಿಟಲ್ ಪಾವತಿ ಆ್ಯಪ್ PhonePe ಮೂಲಕ ಲಂಚ ಸ್ವೀಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರಾಭಿವೃದ್ಧಿ ಕುರಿತು ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, “ಪ್ರತಿ ವಾರ್ಡ್‌ನಲ್ಲೂ 10ರಿಂದ 15 ಮಂದಿಯ ಗುಂಪು ಇ-ಖಾತಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಇದನ್ನು ಒಂದು ವ್ಯಾಪಾರವಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಸಾಮಾನ್ಯ ನಾಗರೀಕರು ತಮ್ಮ ಆಸ್ತಿಯ ಇ-ಖಾತಾ ಪಡೆಯಲು ಪ್ರಯತ್ನಿಸಿದಾಗ, ಅಧಿಕಾರಿಗಳು ಅಡ್ಡಿ-ಅವಾಂತರಗಳನ್ನು ಸೃಷ್ಟಿಸಿ, ಕೊನೆಗೆ ಲಂಚ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಹೆಚ್‌ಬಿಆರ್ ಲೇಔಟ್‌ನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಬಿಡಿಎ ಹರಾಜಿನಲ್ಲಿ ಕಾನೂನುಬದ್ಧವಾಗಿ ಸೈಟ್ ಖರೀದಿಸಿದ ವ್ಯಕ್ತಿಗೆ ‘ಬಿ ಖಾತಾ’ ಎಂದು ಹೇಳಿ ರೂ.30,000 ಲಂಚ ಕೇಳಲಾಗಿದೆ ಎಂದು ವಿವರಿಸಿದರು.
ಮೊದಲ ಕಂತಾಗಿ ರೂ.15,000 ಅನ್ನು ಫೋನ್‌ಪೇ ಮೂಲಕ ಪಾವತಿಸಿರುವುದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ನ್ನೂ ಅವರು ವಿಧಾನಸಭೆಯಲ್ಲಿ ತೋರಿಸಿದರು.
ಇದಲ್ಲದೆ, ಆ ವ್ಯಕ್ತಿಯ ಇ-ಖಾತಾ ಅರ್ಜಿಯನ್ನು ಮೇಲಧಿಕಾರಿಗಳು ಮೂರೂ ಬಾರಿ ತಿರಸ್ಕರಿಸಿದ್ದರೂ, ಮತ್ತೊಮ್ಮೆ ರೂ.20,000 ಪಾವತಿಸಲು ಒತ್ತಾಯಿಸಲಾಗಿದೆ. ಹಣ ಪಾವತಿಸಿದ ಬಳಿಕವೂ ಕೆಲಸ ಆಗದೆ, ಹಣ ಹಿಂದಿರುಗಿಸಲು ಕೇಳಿದಾಗ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಸಂತ್ರಸ್ತ ವ್ಯಕ್ತಿ ಗ್ರಾಹಕ ನ್ಯಾಯಾಲಯ ಹಾಗೂ ಸಹಾಯವಾಣಿ ಸಂಪರ್ಕಿಸಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಕಿಡಿಕಾರಿದರು.
ಮತ್ತಷ್ಟು ಆರೋಪ ಮಾಡಿದ ಅವರು, ನಂಜುಂಡಪ್ಪ ಎಂಬ ನಿವೃತ್ತ ಅಧಿಕಾರಿ ಕಚೇರಿ ಮಾಡಿಕೊಂಡು ಒಂದು ನಿವೇಶನಕ್ಕೆ ಇ -ಖಾತಾ ಮಾಡಿಸಲು 30-40 ಸಾವಿರ ರೂ. ಪಡೆಯುತ್ತಿದ್ದಾರೆ. ಪ್ರತಿ ವಾರ್ಡ್‌ಗಳಲ್ಲಿ ಇಂತಹ ದಂಧೆ ನಡೆಯುತ್ತಿದೆ. ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಕನಕಪುರದಲ್ಲಿ ರೂ.1 ಲಕ್ಷದವರೆಗೂ ದರ ಏರಿಕೆಯಾಗಿದೆ, ದೇವನಹಳ್ಳಿಯಲ್ಲಿ ರೂ.50,000 ವರೆಗೆ ಲಂಚ ಪಡೆಯಲಾಗುತ್ತಿದೆ ಎಂದರು.
ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಪ್ರಶ್ನಿಸಿದ ಅಶೋಕ್ ಅವರು, “ನಿಮ್ಮ ಬಳಿ ಅಧಿಕಾರವಿದೆ, ಭ್ರಷ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡುತ್ತೀರಾ? ಎಂದು ಸವಾಲು ಹಾಕಿದರು.
ಇದೇ ವೇಳೆ, ನಗರಾಭಿವೃದ್ಧಿ ಯೋಜನೆಗಳ ವಿಚಾರದಲ್ಲಿಯೂ ಸರ್ಕಾರವನ್ನು ಟೀಕಿಸಿದ ಅವರು, ಈಜಿಪುರ ಫ್ಲೈಓವರ್, ಉಳ್ಳಾಲ್ ಗ್ರೇಡ್ ಸೆಪರೇಟರ್, ರಾಜರಾಜೇಶ್ವರಿ ನಗರ ಜಂಕ್ಷನ್, ಕೆಂಗೇರಿ ಔಟರ್ ರಿಂಗ್ ರೋಡ್ ಹಾಗೂ ಎಚ್‌ಎಂಟಿ ಪೈಪ್‌ಲೈನ್ ವೃತ್ತ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ನಿಧಿ ಕೊರತೆಯಿಂದ ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.
ಸರ್ಕಾರ ರೂ.7,000–ರೂ.8,000 ಕೋಟಿ ಮೀಸಲಿಟ್ಟಿದೆ ಎಂದು ಹೇಳುತ್ತಿದ್ದರೂ, ವಾಸ್ತವದಲ್ಲಿ ಕೇವಲ ರೂ.3,000 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಬೆಂಗಳೂರಿನ ಬಗ್ಗೆ ಮಾಡಿದ ಹೇಳಿಕೆಗಳಿಗೂ ಪ್ರತಿಕ್ರಿಯೆ ನೀಡದಿರುವುದಕ್ಕಾಗಿ ಡಿಕೆ ಶಿವಕುಮಾರ್ ಅವರನ್ನು ಅಶೋಕ್ ಟೀಕಿಸಿದರು.
ಅವರು ಅವರನ್ನು ತಮ್ಮ ಸಹೋದರ ಎಂದು ಕರೆಯುತ್ತಾರೆ, ಆದರೆ, ಆ ಸಹೋದರ ಬೆಂಗಳೂರನ್ನು ಕೆಳಗಿಟ್ಟು ಮಾತನಾಡಿದಾಗ ಡಿಕೆ.ಶಿವಕುಮಾರ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕಿಡಿಕಾರಿದರು.
Advertisement