

ಬೆಂಗಳೂರು: 'ಬಿಜೆಪಿ ಕಚೇರಿಯಲ್ಲಿ ವಿತರಿಸುವ ಕೇಸರಿ ಶಾಲು ಎಲ್ಲಾ ಅತ್ಯಾಚಾರ, ಅನಾಚಾರಗಳಿಗೂ ಲೈಸೆನ್ಸ್ ಇದ್ದಹಾಗೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು. ಬಿಜೆಪಿಯ ಕೊಡುಗೆ ಇಲ್ಲದೆ ದೇಶದಲ್ಲಿ ಯಾವ ಹಗರಣಗಳೂ ಪೂರ್ಣಗೊಳ್ಳುವುದಿಲ್ಲ. ಡ್ರಗ್ಸ್ ಪೆಡ್ಲಿಂಗ್ ನಿಂದ ಹಿಡಿದು, PSI ಹಗರಣದಿಂದ ಹಿಡಿದು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸೋರಿಕೆಯವರೆಗೆ, ಎಲ್ಲದರಲ್ಲೂ ದೇಶದ ಯುವ ಸಮುದಾಯದ ಕನಸುಗಳ ಮೇಲೆ, ಭವಿಷ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಲೇ ಇದೆ ಬಿಜೆಪಿ ಎಂದಿದ್ದಾರೆ.
ಹಗರಣ ಮಾಡಿದವರು ಬಿಜೆಪಿ ಸೇರಬೇಕು ಮತ್ತು ಬಿಜೆಪಿ ಸೇರಿದ ಮೇಲೆ ಹಗರಣ ಮಾಡಬೇಕು, ಈ ಎರಡಕ್ಕೂ ಕ್ಲೀನ್ ಚಿಟ್ ಮತ್ತು ಲೈಸೆನ್ಸ್ ಕೊಡುವ ಏಜೆನ್ಸಿ ರೀತಿಯಾಗಿದೆ ಬಿಜೆಪಿ. ಭವಿಷ್ಯದ ಕನಸುಗಳನ್ನು ಹೊತ್ತ ದೇಶದ ಸುಮಾರು 23 ಲಕ್ಷಕ್ಕೂ ಅಧಿಕ ಯುವ ಸಮುದಾಯದ ಬದುಕಿಗೆ ಕೊಳ್ಳಿ ಇಟ್ಟಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿರುವುದು ಬಿಜೆಪಿಯ ಮುಖಂಡರು ಎಂಬ ಸತ್ಯ ಹೊರಬಿದ್ದಿದೆ.
ದಿನೇಶ್ ಬಿವಾಲ್ ಮತ್ತು ಮಂಗಿಲಾಲ್ ಬಿವಾಲ್ ಸಹೋದರರು ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಗಳು, ಮತ್ತು ಇವರಿಗೆ ಬಿಜೆಪಿಯ ದೊಡ್ಡ ನಾಯಕರ ಸಂಪರ್ಕವೂ ಇದೆ. ಅಂದಹಾಗೆ ಮತ್ತೊಂದು ವಿಷಾದದ ಸಂಗತಿ ಎಂದರೆ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಮುಖ್ಯಸ್ಥನ ಹೆಸರು ವ್ಯಾಪಂ ಹಗರಣದಲ್ಲೂ ಕೇಳಿಬಂದಿತ್ತು ಎಂದಿದ್ದಾರೆ. ಬಿಜೆಪಿಗೆ ಅಧಿಕಾರ ಕೊಡುವುದೆಂದರೆ ಕಳ್ಳರ ಕೈಗೆ ಖಜಾನೆಯ ಕೀಲಿ ಕೊಟ್ಟಂತೆ" ಎನ್ನುವುದು ನಿರಂತರವಾಗಿ ಸಾಬೀತಾಗುತ್ತಲೇ ಇದೆ ಎಂದು ಕಿಡಿಕಾರಿದ್ದಾರೆ.
Advertisement