ಇಂಧನ ದರ ಏರಿಕೆಗೆ ಜಾಗತಿಕ ಬಿಕ್ಕಟ್ಟೇ ಕಾರಣ: ಕೇಂದ್ರ ಸಚಿವ ಕುಮಾರಸ್ವಾಮಿ ಸಮರ್ಥನೆ

ಐದು ಗ್ಯಾರಂಟಿ ಯೋಜನೆಗಳಿಂದ ಜನರು ಸುಖವಾಗಿ ಬದುಕುತ್ತಿದ್ದಾರೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಅವರು ಪ್ರತಿದಿನ ನನ್ನ ಮನೆಗೆ ಬಂದರೆ ಜನರ ನಿಜವಾದ ಕಷ್ಟ ಏನು ಎನ್ನುವುದು ಗೊತ್ತಾಗುತ್ತದೆ.
HD kumaraswamy at Janarondige Janata Dal’ in Mysuru
‘ಜನರೊಂದಿಗೆ ಜನತಾ ದಳ’ ಸಮಾವೇಶದಲ್ಲಿ ಹೆಚ್.ಡಿ.ಕುಮಾರಸ್ವಾಮಿ
Updated on

ಮೈಸೂರು: ಇಂಧನ ದರ ಏರಿಕೆಗೆ ಜಾಗತಿಕ ಬಿಕ್ಕಟ್ಟೇ ಕಾರಣ, ಅಭಿವೃದ್ಧಿ ಹೊಂದಿದ ಅನೇಕ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇನ್ನೂ ಇಂಧನ ದರ ಕಡಿಮೆಯೇ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ‘ಜನರೊಂದಿಗೆ ಜನತಾ ದಳ’ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಐದು ಗ್ಯಾರಂಟಿ ಯೋಜನೆಗಳಿಂದ ಜನರು ಸುಖವಾಗಿ ಬದುಕುತ್ತಿದ್ದಾರೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಅವರು ಪ್ರತಿದಿನ ನನ್ನ ಮನೆಗೆ ಬಂದರೆ ಜನರ ನಿಜವಾದ ಕಷ್ಟ ಏನು ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.

ಇಂಧನ ದರ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಮೊದಲು ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು, ಇರಾನ್–ಇಸ್ರೇಲ್–ಅಮೆರಿಕಾ ನಡುವಿನ ಜಾಗತಿಕ ಉದ್ವಿಗ್ನತೆಯಿಂದ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ವಿಶ್ವದಾದ್ಯಂತ ಇಂಧನ ದರ ಏರಿಕೆಯಾಗಿದೆ. “ಅಭಿವೃದ್ಧಿ ಹೊಂದಿದ ಅನೇಕ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇನ್ನೂ ಇಂಧನ ದರ ಕಡಿಮೆಯೇ ಇದೆ ಎಂದು ಹೇಳಿದರು.

ಇದೇ ವೇಳೆ ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿಯೇ ಉಳಿಯಲಿದೆ ಎಂದು ಹೇಳಿದ ಅವರು, “ಯಾವ ಒತ್ತಡಕ್ಕೂ ನಾವು ಮಣಿಯುವುದಿಲ್ಲ. ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಲು ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು

ಹುಣಸೂರು ಶಾಸಕ ಜಿಡಿ.ಹರೀಶ್ ಗೌಡ ಮಾತನಾಡಿ, ಸಮಾವೇಶಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ಜೆಡಿಎಸ್‌ಗೆ ಇನ್ನೂ ಬಲವಾದ ಬೆಂಬಲವಿದೆ ಎಂಬುದನ್ನು ತೋರಿಸುತ್ತದೆ ಎಂದರು.

ಕೇವಲ ಐದು ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದರೂ ಕ್ಷೇತ್ರದ ಜನರು ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದಾರೆ ಎಂದು ಹೇಳಿದರು.

HD kumaraswamy at Janarondige Janata Dal’ in Mysuru
ಕುಮಾರಸ್ವಾಮಿ ಕುಟುಂಬ ರಿಯಲ್ ಎಸ್ಟೇಟ್ ಮೂಲಕ ಆಸ್ತಿ ಗಳಿಸಿದೆ; ದೊಡ್ಡಗುಬ್ಬಿ, ಚಿಕ್ಕಗುಬ್ಬಿ ಜನರನ್ನು ಕೇಳಿ: ಡಿ.ಕೆ ಶಿವಕುಮಾರ್

ಇದೇ ವೇಳೆ ರಾಜ್ಯದಲ್ಲಿ ಮತ್ತೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಹರೀಶ್ ಗೌಡ, “ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಕೂಡ ಭವಿಷ್ಯದಲ್ಲಿ ಪ್ರಮುಖ ಸ್ಥಾನಕ್ಕೇರುವರು ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಈಗ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. “ವಿರೋಧಿಗಳು ಜೆಡಿಎಸ್ ಕೇವಲ ಹಳೆ ಮೈಸೂರು ಭಾಗದ ಪಕ್ಷ ಎಂದು ಹೇಳುತ್ತಾರೆ. ಆದರೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಸೇರಿ ರಾಜ್ಯಾದ್ಯಂತ ಪಕ್ಷ ತನ್ನ ಬಲ ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.

ಇದೇ ವೇಳೆ 2028ರಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಹುದ್ದೆಗಿಂತ ರಾಜ್ಯದ ಅಭಿವೃದ್ಧಿಯೇ ಮುಖ್ಯ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಕಡಿಮೆ ಅವಧಿಗೆ ಮುಖ್ಯಮಂತ್ರಿ ಆಗಿದ್ದರೂ ಅವರ ಆಡಳಿತವನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ ಎಂದರು.

ಏತನ್ಮಧ್ಯೆ ಚಾಮುಂಡೇಶ್ವರಿ ಕ್ಷೇತ್ರದ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರೂ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನ ನಡೆಸಿತು.

ಸಮಾವೇಶದ ಬ್ಯಾನರ್‌ಗಳು ಮತ್ತು ಫ್ಲೆಕ್ಸ್‌ಗಳಲ್ಲಿ ಜಿಟಿ ದೇವೇಗೌಡರ ಫೋಟೋ ಕಾಣಿಸದಿರುವುದು ಹಲವರ ಹುಬ್ಬೇರುವಂತೆ ಮಾಡಿತು

ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, “ಹಿಂದೆ ಪಕ್ಷದೊಳಗಿನ ಕೆಲವು ತಪ್ಪುಗಳಿಂದ ಜೆಡಿಎಸ್‌ಗೆ ನಷ್ಟವಾಯಿತು. ಆದರೆ, ಈಗ ಆ ತಪ್ಪುಗಳಿಂದ ಪಾಠ ಕಲಿತಿದ್ದೇವೆ” ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com