

ಬೆಂಗಳೂರು: ಪದತ್ಯಾಗ ಮಾಡಿದ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್, ವಿಶೇಷವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಲು ಇಂದು ಶುಕ್ರವಾರ ಭೇಟಿ ಮಾಡಿದ್ದು, ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿರುವ ಡಿ.ಕೆ. ಶಿವಕುಮಾರ್ ಕೂಡ ಅವರ ಹಿಂದೆ ದೆಹಲಿಗೆ ಹೋಗಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಮೂಲಗಳ ಪ್ರಕಾರ, ಡಿ ಕೆ ಶಿವಕುಮಾರ್ ಅವರು ಹೊಸ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಎಂಎಲ್‌ಸಿ ಡಾ. ಯತೀಂದ್ರ ಅವರನ್ನು ಉಪ ಮುಖ್ಯಮಂತ್ರಿಯಾಗಿ ಸೇರಿಸಿಕೊಳ್ಳುವಂತೆ ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್‌ರನ್ನು ಮನವೊಲಿಸಲು ಯೋಜನೆ ರೂಪಿಸಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಸಮಾಧಾನಗೊಂಡವರ ವಿರುದ್ಧ ಸರ್ಕಾರದ ಸ್ಥಿರತೆ ಮತ್ತು ಸಂಯಮ ಕಾಯ್ದುಕೊಳ್ಳಲು ಇದು ಒಂದು ರೀತಿಯ ವಿಮೆಯಂತೆ ಕಾರ್ಯನಿರ್ವಹಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ರಾಜ್ಯಸಭೆಗೆ ಪ್ರವೇಶಿಸುವಂತೆ ಪಕ್ಷದ ಹೈಕಮಾಂಡ್ ನೀಡಿದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದ ಸಿದ್ದರಾಮಯ್ಯ ಅವರಿಗೆ, ರಾಹುಲ್ ಗಾಂಧಿ ಅವರಿಂದ ಪುತ್ರನಿಗೆ ಡಿಸಿಎಂ ಹುದ್ದೆ ನೀಡುವ ಪ್ರಸ್ತಾಪ ಬಂದಾಗ ಕೆಲವು ಆಕ್ಷೇಪಗಳಿದ್ದವು. ಆದರೆ ಈಗ ಅವರು ಈ ಒಪ್ಪಂದವನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ವಿಶೇಷವಾಗಿ ಕುರುಬ ಸಮುದಾಯ ಸೇರಿದಂತೆ ಸಿದ್ದರಾಮಯ್ಯ ಬೆಂಬಲಿಗರ ಅಸಮಾಧಾನ ಶಮನವಾಗಬಹುದು ಎಂದು ಮೂಲಗಳು ತಿಳಿಸಿವೆ.
ಪರಮೇಶ್ವರ್ ವಿಧಾನಸಭಾಧ್ಯಕ್ಷ?
ಡಾ ಪರಮೇಶ್ವರ್ ಅವರು ಕೈಗಾರಿಕಾ ಖಾತೆಯನ್ನು ಬಯಸುತ್ತಿದ್ದಾರೆ. ಆದರೆ ಅವರಿಗೆ ವಿಧಾನಸಭಾಧ್ಯಕ್ಷರ ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಹೊಸ ಸಚಿವ ಸಂಪುಟದಲ್ಲಿ ಸಚಿವ ಸ್ಥಾನಗಳಿಗೆ ಪರಿಗಣನೆಯಲ್ಲಿರುವ ಹೊಸ ಮುಖಗಳಲ್ಲಿ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ, ಎಂಎಲ್‌ಸಿಗಳಾದ ಬಿ.ಕೆ. ಹರಿಪ್ರಸಾದ್ ಹಾಗೂ ಸಲೀಂ ಅಹ್ಮದ್, ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪ್ರತಿನಿಧಿಗೆ ಪ್ರತಿಕ್ರಿಯಿಸಿ, ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕುರಿತು ಸ್ಪಷ್ಟತೆ ಸಿಗಲಿದೆ. ಈ ಪ್ರಕ್ರಿಯೆಗೆ ಒಂದು ಅಥವಾ ಎರಡು ದಿನಗಳು ಬೇಕಾಗಬಹುದು. ಜೂನ್ 1ರಂದು ಪ್ರಮಾಣವಚನ ಸಮಾರಂಭ ನಡೆಯುವ ನಿರೀಕ್ಷೆಯಿದೆ ಎಂದರು.
ಇನ್ನೊಬ್ಬ ಕಾಂಗ್ರೆಸ್ ನಾಯಕರು, ಅಧಿಕಾರ ವರ್ಗಾವಣೆ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ ಎಂದು ಹೇಳಿದರು. ಈಗ ಡಿ ಕೆ ಶಿವಕುಮಾರ್ ಅವರು ಜ್ಯೋತಿಷಿಗಳ ಸಲಹೆ ಪಡೆಯುವುದರ ಮೇಲೂ ಅವಲಂಬಿತವಾಗಿದೆ ಎಂದು ಹೇಳಿದರು.
ಡಿಸಿಎಂ ಹುದ್ದೆಗಳ ಸಂಖ್ಯೆ, ಸಚಿವ ಸಂಪುಟದ ಖಾತೆಗಳ ಹಂಚಿಕೆ ಹಾಗೂ ಹೊಸ ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ನಾಯಕರು ದೆಹಲಿಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿಯಾಗಲಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುನ್ನವೇ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ಪಕ್ಷದ ಹೈಕಮಾಂಡ್ ಅನುಮೋದನೆಯೊಂದಿಗೆ ಸಚಿವ ಸಂಪುಟ ರಚನೆ ಕುರಿತ ಯೋಜನೆಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
ರಾಹುಲ್ ಗಾಂಧಿಯವರ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯೂ ಮಹತ್ವದ್ದಾಗಿರಲಿದೆ. ಅವರ ಪುತ್ರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೂ ಡಿಸಿಎಂ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಇದೆ. ಇದರಿಂದ ಡಿ ಕೆ ಶಿವಕುಮಾರ್ ಅವರಿಗೆ ಎಷ್ಟು ಡಿಸಿಎಂಗಳು ಇರುತ್ತಾರೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಸಚಿವ ಸಂಪುಟದ ವಿಷಯದಲ್ಲಿ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್, ಕೃಷ್ಣ ಭೈರೇಗೌಡ, ಜಮೀರ್ ಅಹ್ಮದ್ ಖಾನ್ ಮತ್ತು ಬೈರತಿ ಸುರೇಶ್ ಸೇರಿದಂತೆ ಪ್ರಮುಖ ನಾಯಕರನ್ನು ಉಳಿಸಿಕೊಂಡು, ಇನ್ನೂ ಹೆಚ್ಚಿನ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Advertisement