KPCC ಪಟ್ಟ: 'ಒನ್ ಮ್ಯಾನ್-ಒನ್ ಪೋಸ್ಟ್' ಸೂತ್ರಕ್ಕೆ ಜಾರಕಿಹೊಳಿ ಅಸಮಾಧಾನ; ಅಧ್ಯಕ್ಷ ಸ್ಥಾನದೊಂದಿಗೆ ಸಚಿವ ಸ್ಥಾನಕ್ಕೆ ಪಟ್ಟು..? Video

ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ.ಶಿವಕುಮಾರ್ ಅವರು ರಾಜ್ಯ ರಾಜಕೀಯದಲ್ಲಿ ಪ್ರಮುಖ ಶಕ್ತಿ ಕೇಂದ್ರವಾಗಿದ್ದು, ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಕಾಂಗ್ರೆಸ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
Dk Shivakumar And satish jarkiholi
ಡಿ.ಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ
Updated on

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆಗಳಿಗೆ ತೆರೆ ಬಿದ್ದಿದ್ದು, ಇದೀಗ ಪಕ್ಷದೊಳಗೆ ಹೊಸ ಅಧಿಕಾರ ಸಮರ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಕೈ ಪಾಳಯದಲ್ಲಿ ತೀವರಗೊಂಡಿದ್ದು, ಹಲವು ಹಿರಿಯ ನಾಯಕರು ತೆರೆಮರೆಯಲ್ಲಿ ಲಾಬಿ ಆರಂಭಿಸಿದ್ದಾರೆ.

ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ.ಶಿವಕುಮಾರ್ ಅವರು ರಾಜ್ಯ ರಾಜಕೀಯದಲ್ಲಿ ಪ್ರಮುಖ ಶಕ್ತಿ ಕೇಂದ್ರವಾಗಿದ್ದು, ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಕಾಂಗ್ರೆಸ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಹೈಕಮಾಂಡ್ ಶೀಘ್ರದಲ್ಲೇ ಸಂಘಟನಾ ಮಟ್ಟದಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳ ನಡುವೆಯೇ ಈ ಪೈಪೋಟಿ ತೀವ್ರಗೊಂಡಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಲವು ಹಿರಿಯ ಸಚಿವರ ಹೆಸರುಗಳು ಕೇಳಿಬರುತ್ತಿವೆ. ಜಿ.ಪರಮೇಶ್ವರ, ಈಶ್ವರ ಖಂಡ್ರೆ ಹಾಗೂ ರಾಮಲಿಂಗಾ ರೆಡ್ಡಿ ಅವರ ಹೆಸರುಗಳು ಚರ್ಚೆಯಲ್ಲಿದ್ದರೂ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಪ್ರಮುಖ ಆಕಾಂಕ್ಷಿಯಾಗಿಯಾಗಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರಭಾವಿ ನಾಯಕನಾಗಿರುವ ಜಾರಕಿಹೊಳಿ, ಅಹಿಂದ ಸಮುದಾಯಗಳಲ್ಲೂ ಬಲವಾದ ಬೆಂಬಲ ಹೊಂದಿದ್ದಾರೆ.

ಸಿದ್ದರಾಮಯ್ಯ ಅವರ ಆಪ್ತರಾಗಿರುವ ಅವರು, ಪಕ್ಷದ ಸಂಘಟನಾತ್ಮಕ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಹೊಸ ಗೊಂದಲವೂ ಮೂಡಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕಾದರೆ ಸಚಿವ ಸ್ಥಾನ ತ್ಯಜಿಸಬೇಕು ಎಂಬ ಹೈಕಮಾಂಡ್‌ನ ಸೂಚನೆಗೆ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

Dk Shivakumar And satish jarkiholi
ಶಿವಕುಮಾರ್ ಯುಗಾರಂಭ: ಅಡೆತಡೆಗಳ ನಡುವೆಯೂ ಫೀನಿಕ್ಸ್ ನಂತೆ ಎದ್ದು ನಿಂತ ಟ್ರಬಲ್ ಶೂಟರ್!

ಪಕ್ಷದ ಜವಾಬ್ದಾರಿ ನಿರ್ವಹಿಸುವ ಜೊತೆಗೆ ಸಚಿವ ಸ್ಥಾನದಲ್ಲೂ ಮುಂದುವರಿಯಲು ಅವಕಾಶ ನೀಡಬೇಕು ಎಂಬ ನಿಲುವು ಹೊಂದಿದ್ದಾರೆ ಎನ್ನಲಾಗಿದೆ.

ಜಾರಕಿಹೊಳಿ ಬೆಂಬಲಿಗರು, 2023ರ ವಿಧಾನಸಭೆ ಚುನಾವಣೆಯ ಬಳಿಕ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿದ ಉದಾಹರಣೆಯನ್ನು ಮುಂದಿಟ್ಟಿದ್ದಾರೆ.

ಡಿಕೆ.ಶಿವಕುಮಾರ್ ಅವರಿಗೆ ನೀಡಿದ ಅವಕಾಶವನ್ನು ಜಾರಕಿಹೊಳಿಗೆ ನಿರಾಕರಿಸಿದರೆ ಅದು ಸಮಾನತೆಯ ಪ್ರಶ್ನೆ ಎಬ್ಬಿಸುತ್ತದೆ ಎಂಬ ಮಾತುಗಳು ಪಕ್ಷದೊಳಗೆ ಕೇಳಿಬರುತ್ತಿವೆ.

ಆದರೆ, ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ‘ಒಬ್ಬರಿಗೆ ಒಂದು ಹುದ್ದೆ’ ಎಂಬ ತತ್ವವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬಯಸುತ್ತಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಅಧಿಕಾರ ಮತ್ತು ಸಂಘಟನಾ ನಿಯಂತ್ರಣ ಒಂದೇ ನಾಯಕರ ಕೈಯಲ್ಲಿ ಕೇಂದ್ರೀಕೃತವಾಗಬಾರದು ಎಂಬ ಅಭಿಪ್ರಾಯವೂ ಹೈಕಮಾಂಡ್‌ನಲ್ಲಿ ಬಲವಾಗುತ್ತಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್‌ಗೆ ಇದು ಸುಲಭದ ನಿರ್ಧಾರವಲ್ಲ. ಜಾರಕಿಹೊಳಿ ಉತ್ತರ ಕರ್ನಾಟಕ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳಲ್ಲಿ ಪ್ರಭಾವ ಹೊಂದಿರುವ ಕಾರಣ ಅವರನ್ನು ಅಸಮಾಧಾನಗೊಳಿಸುವುದು ಪಕ್ಷಕ್ಕೆ ಭವಿಷ್ಯದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಸಂಘಟನಾ ಮತ್ತು ಆಡಳಿತ ಹುದ್ದೆಗಳನ್ನು ಬೇರ್ಪಡಿಸುವ ಮೂಲಕ ಆಂತರಿಕ ಸಮತೋಲನ ಕಾಪಾಡಬೇಕೆಂಬ ಒತ್ತಡವೂ ಹೈಕಮಾಂಡ್ ಎದುರಿಸುತ್ತಿದೆ.

ಜಾರಕಿಹೊಳಿ ಸಚಿವ ಸ್ಥಾನ ತ್ಯಜಿಸಲು ಒಪ್ಪದಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಪರ್ಯಾಯ ನಾಯಕರತ್ತ ಮುಖ ಮಾಡುವ ಸಾಧ್ಯತೆ ಇದೆ. ಇದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಇನ್ನಷ್ಟು ಒಳರಾಜಕೀಯ ಮತ್ತು ಲಾಬಿ ರಾಜಕಾರಣ ಜೋರಾಗುವ ಸಾಧ್ಯತೆಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com