

ಬೆಂಗಳೂರು: ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅಮೆರಿಕದಿಂದ ಹಣವನ್ನು ಪಡೆದರೆ, ಅದರ ಸಹ-ಸಂಸ್ಥಾಪಕ ಅಶುತೋಷ್ ರಾಂಕಾ ಪಾಕಿಸ್ತಾನದಿಂದ ಹಣ ಪಡೆದಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.
ಪಾಕಿಸ್ತಾನಿ ರಾಜಕಾರಣಿಗಳು ಸೇರಿದಂತೆ ಭಾರತ ವಿರೋಧಿ ಸಂಘಟನೆಗಳು ಮತ್ತು ವಿದೇಶಿ ಅನುದಾನಿತ ಸಂಸ್ಥೆಗಳು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ವಿರುದ್ಧದ ಹೋರಾಟಕ್ಕೆ ಹಣಕಾಸು ಒದಗಿಸುತ್ತಿವೆ ಎಂದು ಕೇಂದ್ರ ಸಚಿವರು ಆರೋಪಿಸಿದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಂಗ್, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮತ್ತು ಅಶುತೋಷ್ ರಾಂಕಾ, ಅಮೆರಿಕ ಮತ್ತು ಪಾಕಿಸ್ತಾನದಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಈ "ಸ್ವ-ಘೋಷಿತ ಹೋರಾಟಗಾರರು" ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
"ಭಾರತ ವಿರೋಧಿ ಎನ್‌ಜಿಒಗಳು ಮತ್ತು ದೇಶದ ಒಳಗೆ ಮತ್ತು ಹೊರಗೆ ಕಾರ್ಯನಿರ್ವಹಿಸುತ್ತಿರುವ ಭಾರತ ವಿರೋಧಿ ಸಂಘಟನೆಗಳು ಸೇರಿದಂತೆ ಅನಧಿಕೃತ ಮೂಲಗಳಿಂದ ಅವರಿಗೆ ಹಣಕಾಸು ನೆರವು ನೀಡಲಾಗುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ" ಎಂದು ಅವರು ಹೇಳಿದರು.
ಆಪರೇಷನ್ ಸಿಂಧೂರ್ ಸಮಯದಲ್ಲಿ ಎಸ್‌ಐಆರ್ ವಿರೋಧಿ ಅಭಿಯಾನದಲ್ಲಿ ಭಾಗವಹಿಸಿದ ಮಹಿಳೆಯೊಬ್ಬರು ಸಹ ಹಣವನ್ನು ಪಡೆಯುತ್ತಿದ್ದರು ಎಂದು ಸಿಂಗ್ ತಿಳಿಸಿದರು.
"ನಾವು ಈ ಸುಳ್ಳು ಪ್ರಚಾರವನ್ನು ಬಲವಾಗಿ ಬಯಲಿಗೆಳೆಯಬೇಕು ಮತ್ತು ಸತ್ಯಾಂಶಗಳನ್ನು ಜನರಿಗೆ, ವಿಶೇಷವಾಗಿ ಕರ್ನಾಟಕದ ಜನರಿಗೆ ತಲುಪಿಸಬೇಕು. ನಾವು ಎಚ್ಚರದಿಂದಿರಬೇಕು ಮತ್ತು ಇಂತಹ ವಿಧ್ವಂಸಕ ಹಾಗೂ ದುರುದ್ದೇಶಪೂರಿತ ಅರಾಜಕತಾವಾದಿಗಳಿಂದ ಜಾಗರೂಕರಾಗಿರಬೇಕು" ಎಂದು ಅವರು ಹೇಳಿದರು.
ಮತದಾರರ ಪಟ್ಟಿಯಿಂದ ಕೇವಲ ಹೆಸರುಗಳನ್ನು ತೆಗೆದುಹಾಕಲಾಗಿಲ್ಲ, ಬದಲಿಗೆ 18 ವರ್ಷ ತುಂಬಿದ ಸುಮಾರು 2.5 ಕೋಟಿ ಹೊಸ, ಉತ್ಸಾಹಿ ಯುವ ಮತದಾರರನ್ನು ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಇದು ಭಾರತದ ಪ್ರಜಾಪ್ರಭುತ್ವದ ಹೊಸ ಚೈತನ್ಯವಾಗಿದೆ. ಕಾಂಗ್ರೆಸ್ ಪಕ್ಷವು ಫಾರಂ 6 ಅನ್ನು ಅಕ್ರಮವಾಗಿ ಬದಲಾಯಿಸಲಾಗಿದೆ ಎಂದು ಹಬ್ಬಿಸುತ್ತಿದೆ, ಆದರೆ ಅದಕ್ಕೆ ಯಾವುದೇ ದಾಖಲೆ ಅಥವಾ ಪುರಾವೆ ಒದಗಿಸಲು ಸಾಧ್ಯವಾಗಿಲ್ಲ ಎಂದರು.