

ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಶೀಘ್ರವೇ ಘೋಷಣೆಯಾಗಲಿದ್ದು, ಜಿಲ್ಲೆಯಲ್ಲಿ ರಾಜಕಾರಣ ಗರಿಗೆದರುತ್ತಿದೆ. ಉಪ ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನ. 3ರಂದು ಹಿರಿಯೂರು ಪ್ರವಾಸ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.
ಹಿರಿಯೂರಿನ ಶಾಸಕರಾಗಿದ್ದ ಡಿ. ಸುಧಾಕರ್ (ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಯೋಜನಾ ಸಚಿವರಾಗಿದ್ದರು) ಅವರ ನಿಧನದ ನಂತರ, ಉಪಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ, ಮಂಗಳವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಿರಿಯೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಶಿವಕುಮಾರ್ ಅವರು ಚಾಲನೆ ನೀಡಲಿರುವ ಯೋಜನೆಗಳಲ್ಲಿ, ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯಲ್ಲಿ 244 ಕೋಟಿ ರೂಪಾಯಿ ವೆಚ್ಚದಲ್ಲಿ 16 ಕೆರೆಗಳು ಮತ್ತು ಗಾಯತ್ರಿ ಜಲಾಶಯವನ್ನು ತುಂಬಿಸುವ ಯೋಜನೆಯೂ ಸೇರಿದೆ. ಇದನ್ನು ಉಪಚುನಾವಣೆಗೆ ಕಾಂಗ್ರೆಸ್ ನಡೆಸುತ್ತಿರುವ ಸಿದ್ಧತೆ ಎಂದು ಹೇಳಲಾಗುತ್ತಿದೆ
ಕ್ಷೇತ್ರದಾದ್ಯಂತ ವಿವಿಧ ಕಾಮಗಾರಿಗಳು ಉದ್ಘಾಟನೆ, ಶಂಕುಸ್ಥಾಪನೆಗೆ ಕಾಯುತ್ತಿವೆ. ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಾದರೆ ಅವುಗಳ ಉದ್ಘಾಟನೆ ತಡವಾಗುತ್ತದೆ. ಹೀಗಾಗಿ ಮುಖ್ಯಮಂತ್ರಿ ಮಂಗಳವಾರ ದಿನವಿಡೀ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಡಿ. ಸುಧಾಕರ್ ನಿಧನಾನಂತರ ಕ್ಷೇತ್ರದಲ್ಲಿ ಶಾಸಕರಿಲ್ಲದ ಕಾರಣ ಅವರ ಜವಾಬ್ದಾರಿಯನ್ನು ಮುಖ್ಯಮಂತ್ರಿ ಅವರೇ ಹೊತ್ತಿದ್ದಾರೆ ಎಂದೇ ಈ ಪ್ರವಾಸವನ್ನು ಬಣ್ಣಿಸಲಾಗುತ್ತಿದೆ.
ಡಿ.ಸುಧಾಕರ್ ಮುಖ್ಯಮಂತ್ರಿ ಅವರಿಗೆ ಆಪ್ತ ಗೆಳೆಯರಾಗಿದ್ದರು. ಮೇ 10ರಂದು ಅವರು ನಿಧನರಾದರು. ಶಾಸಕರು ನಿಧನರಾದ 6 ತಿಂಗಳ ಒಳಗೆ ಉಪ ಚುನಾವಣೆ ಘೋಷಣೆಯಾಗಬೇಕು. ನ. 10ಕ್ಕೆ ಅವರು ನಿಧನರಾಗಿ 6 ತಿಂಗಳು ಪೂರ್ಣವಾಗುತ್ತದೆ. ಅಷ್ಟರೊಳಗೆ ಚುನಾವಣೆ ಘೋಷಣೆಯಾಗುವುದು ಖಾತ್ರಿ. ಹೀಗಾಗಿ ಮುಖ್ಯಮಂತ್ರಿ ಹಿರಿಯೂರು ಪ್ರವಾಸ ಕೈಗೊಂಡಿದ್ದಾರೆ. ಇದರ ಹಿಂದೆ ರಾಜಕೀಯ ಲಾಭವೂ ಇರುವ ಕಾರಣ ತರಾತುರಿಯಲ್ಲಿ ಪ್ರವಾಸ ನಿಗದಿಯಾಗಿದೆ.
ಇತ್ತ ಬಿಜೆಪಿ ಕೂಡ ತನ್ನ ಮೈತ್ರಿ ಪಕ್ಷವಾದ ಜೆಡಿ(ಎಸ್) ಜೊತೆ ಚರ್ಚೆ ನಡೆಸುತ್ತಿದ್ದು, 'ಒಮ್ಮತದ' ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿದೆ. ಈ ಕ್ಷೇತ್ರವನ್ನು ಜೆಡಿ(ಎಸ್) ಮತ್ತು ಜನತಾ ದಳ ತಲಾ ಒಮ್ಮೆ ಗೆದ್ದಿವೆ.
"ಉಪಚುನಾವಣೆಯ ಘೋಷಣೆ ಯಾವುದೇ ಕ್ಷಣದಲ್ಲಿ ಆಗಬಹುದು. ಈ ಬಗ್ಗೆ ನಾವು ಜೆಡಿ(ಎಸ್) ನಾಯಕರಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಬೇಕಿದೆ," ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.